ಕೋಲಾರ: ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆಯ ಪಿಎಸ್ ಐ ಮತ್ತು ಇಬ್ಬರು ಪೇದೆಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಡಿವೈಎಸ್ ಪಿ ನಂದಕುಮಾರ್ ವರದಿ ಆಧರಿಸಿ ಪಿಎಸ್ಐ ಪ್ರದೀಪ್ ಸಿಂಗ್, ಕಾನ್ಸ್ ಟೇಬಲ್ ಮಂಜುನಾಥ್, ಮಹಾಂತೇಶ್ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಮುನಿರಾಜು, ಬಾಲಾಜಿ ಎಂಬ ಆರೋಪಿಗಳನ್ನು ಪೊಲೀಸರು ಅಕ್ಟೋಬರ್ 17 ರಂದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು. ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ಪೊಲೀಸರು ಆರೋಪಿಗಳನ್ನು 15 ದಿನಗಳ ಕಾಲ ಪೊಲೀಸ್ ಠಾಣೆ ಮತ್ತು ಬೇರೆ ಬೇರೆ ಸ್ಥಳಗಳಲ್ಲಿರಿಸಿ ಅಕ್ರಮವಾಗಿ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಆಂಧ್ರದ ಮದನಪಲ್ಲಿ ನಿವಾಸಿ ಮುನಿರಾಜು ಮೃತಪಟ್ಟಿದ್ದನು.
ಲಾಕಪ್ ಡೆತ್ ಪ್ರಕರಣವನ್ನು ತನಿಖೆ ನಡೆಸಿ ಡಿವೈಎಸ್ ಪಿ ನಂದಕುಮಾರ್ ವರದಿ ನೀಡಿದ್ದರು. ಈ ವರದಿ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ.