ಮೈಸೂರು: ಅಧಿಕಾರಿಗಳು ಸಮಸ್ಯೆ ಇರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಅಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಹಾಗೂ ಮುಂಬರುವ ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರು ಸಮಸ್ಯೆ ಆಗದಂತೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ ಎಂ ಗಾಯಿತ್ರಿಯವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಜಿಲ್ಲಾ ಪಂಚಾಯತ್ ಅಬ್ದುಲ್ ನಜಿರ್ ಸಾಬ್ ಸಭಾಂಗಣದಲ್ಲಿ ನಡೆದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು ಅಧಿಕಾರಿಗಳು ಜನರ ಕಷ್ಟವನ್ನು ಆಲಿಸಿ ಅವರ ಸಮಸ್ಯೆಗಳಿಗೆ ಮಾರ್ಗೋಪಾಯಗಳನ್ನು ತಿಳಿಸಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ಪ್ರತಿಯೊಬ್ಬರಿಗೂ ನೀರು ಅತ್ಯಗತ್ಯ. ಮುಂದೆ ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮೊದಲು ಗ್ರಾಮಗಳಲ್ಲಿ ಇರುವ ಬಾವಿ, ಕೆರೆ, ಬೋರ್ ವೆಲ್ ಗಳಲ್ಲಿ ನೀರಿನ ಮಟ್ಟವನ್ನು ಪರೀಕ್ಷಿಸಿ ಕಡಿಮೆಯಾಗಿರುವುದು ಕಂಡುಬoದರೆ ನೀರನ್ನು ತುಂಬಿಸಲು ಅಗತ್ಯ ಕ್ರಣ ವಹಿಸಬೇಕು ಎಂದು ತಿಳಿಸಿದರು.
ನೀರಿನ ಸಮಸ್ಯೆ ಇರುವ ಹಾಡಿಯಲ್ಲಿರವ ಜನರಿಗೆ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲು ಅಗತ್ಯ ಕ್ರಮವಹಿಸಬೇಕು. ಹಾಡಿಯಲ್ಲಿ ಸ್ಮಶಾಣ, ಗೋಮಾಳ ಇತ್ಯಾದಿ ಕುಂದು-ಕೊರತೆಗಳು ಕಂಡುಬoದರೆ ತಕ್ಷಣವೇ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಇದು ಬೇಸಿಗೆ ಸಮಯವಾದ್ದರಿಂದ ಡೀಹೈಡ್ರೇಟ್, ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ತಮ್ಮ ತಮ್ಮ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿನ ಜನರಿಗೆ ವೈದ್ಯಕೀಯ ಇಲಾಖೆಯಿಂದ ಬಂದ ಮಾಹಿತಿಯನ್ನು ತಲುಪಿಸಿ, ಅವರಿಗೆ ಸರಿಯಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಚರಂಡಿಗಳು, ರಸ್ತೆ ಬದಿಗಳು, ನೀರಿನ ಟ್ಯಾಂಕರ್ ಗಳನ್ನು, ಬೋರ್ ವೆಲ್ ಗಳನ್ನು ಸ್ವಚ್ಛಗೊಳಿಸಿ ಗ್ರಾಮವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಇದನ್ನು ಪ್ರತಿಯೊಬ್ಬ ಅಧಿಕಾರಿಯು ಒಂದು ಅಭಿಯಾನದಂತೆ ಮಾಡಿ ಗ್ರಾಮ-ಗ್ರಾಮಗಳಿಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ಇಲಾಖೆಯ ಅಧಿಕಾರಿಗಳು ತಾವು ಮಾಡುವ ಪ್ರತಿಯೊಂದು ಕೆಲಸದ ದಾಖಲೆಗಳನ್ನು ಪ್ರತ್ಯೇಕ ಫೈಲ್ ಮಾಡಬೇಕು. ಇದರಿಂದ ಎಲ್ಲಾ ಕೆಲಸಗಳ ಒಂದು ಚಿತ್ರಣ ಹುಡುಕುವುದು ಸುಲಭವಾಗುತ್ತದೆ. ಮುಖ್ಯಮoತ್ರಿಗಳ ತವರು ಜಿಲ್ಲೆಯಾದ್ದರಿಂದ ಇಲ್ಲಿ ಯಾವುದೇ ರೀತಿಯ ಕೆಲಸಗಳು ಬಾಕಿ ಉಳಿಯದಂತೆ ನೋಡಿಕೊಳ್ಳಬೇಕು. ಹಾಗೆಯೇ ಜನರಿಗೂ ಯಾವುದೇ ತೊಂದರೆಯಾಗದoತೆ ನೋಡಿಕೊಳ್ಳುವುದು ಬಹಳ ಮುಖ್ಯ ಹಾಗಾಗಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿ(ಅಭಿವೃದ್ಧಿ)ಗಳಾದ ಕೃಷ್ಣರಾಜು ಡಿ.ಎಸ್ ಅವರು ಮಾತನಾಡಿ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಮನೆ ಮನೆಗೂ ಶೌಚಾಲಯಗಳನ್ನು ನಿರ್ಮಿಸಬೇಕಾಗಿದೆ. ವಸತಿ ಯೋಜನೆಯಡಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಿ ಜನರಿಗೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಅವರಿಂದ ಸರಿಯಾದ ದಾಖಲೆಗಳನ್ನು ಪಡೆಯಬೇಕು. ಇದರಿಂದ ಸ್ವೀಕರಿಸಿದ ಅರ್ಜಿಗಳ ಸಂಖ್ಯೆ, ತಿರಸ್ಕರಿಸಿದ ಅರ್ಜಿಗಳ ಸಂಖ್ಯೆಯಲ್ಲಿ ಅಂತರ ಕಡಿಮೆಯಾಗಬೇಕು. ಅವಶ್ಯಕತೆ ಇರುವ ಪ್ರತಿಯೊಬ್ಬ ವ್ಯಕ್ತಿಗೂ ಸೌಲಭ್ಯ ದೊರಕುವಂತೆ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ಮೈಸೂರು ಜಿಲ್ಲೆಯ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಸೇರಿಸಂತೆ ಇತರ ಅಧಿಕಾರಿಗಳು ಉಪಸ್ಶಿತರಿದ್ದರು.