ಮಂಡ್ಯ (Mandya)-ಮದುವೆಯಾಗಿ ನವ ಜೀವನಕ್ಕೆ ಕಾಲಿಟ್ಟ ಮರುಕ್ಷಣವೇ ಮಧುಮಗಳು ನೇರವಾಗಿ ಕಾಲೇಜಿಗೆ ಬಂದು ಪರೀಕ್ಷೆ ಬರೆದಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಎಸ್‍ಟಿಜಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ ಎಲ್.ವೈ.ಐಶ್ವರ್ಯ(ತೇಜಸ್ವಿನಿ) ತಾಳಿ ಕಟ್ಟಿಸಿಕೊಂಡು ಮದುವೆ ಮಂಟಪದಿಂದ ನೇರವಾಗಿ ಕಾಲೇಜಿಗೆ ಬಂದು ಪರೀಕ್ಷೆ ಬರೆದು ಮಾದರಿಯಾಗಿದ್ದಾರೆ.
ಮದುವೆ ಕಾರಣಕ್ಕೆ ಪರೀಕ್ಷೆಗೆ ತೊಂದರೆ ಆಗಬಾರದೆಂದು ಯೋಚಿಸಿ ಗಂಡು ಮತ್ತು ಹೆಣ್ಣಿನ ಮನೆಯವರಿಬ್ಬರು ಐಶ್ವರ್ಯಳನ್ನು ಪ್ರೋತ್ಸಾಹಿಸಿ ಪರೀಕ್ಷೆ ಬರೆಯಲು ಕಳುಹಿಸಿ ಕೊಡಲು ನಿಶ್ಚಯಿಸಿದರು. ಮಧುಮಗಳ ಅಲಂಕಾರದಲ್ಲೇ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದು ಇತರ ಹೆಣ್ಣು ಮಕ್ಕಳಿಗೂ ಪ್ರೇರಣೆಯಾಗಿದ್ದಾಳೆ.
ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಪತಿ ಸಹಕಾರ ನೀಡಿದ್ದಾರೆ. ಪರೀಕ್ಷೆ ಮುಗಿಯುವ ತನಕ ಕಾಲೇಜ್ ಕ್ಯಾಂಪಸ್ನಲ್ಲಿ ಕಾದು ಬಳಿಕ ಪತಿ ಹಾಗೂ ಕುಟುಂಬಸ್ಥರು ಮನೆಗೆ ಕರೆದು ಕೊಂಡು ಹೋಗಿದ್ದಾರೆ. ಪರೀಕ್ಷೆ ಮುಗಿದ ಬಳಿಕ ಅವಿನಾಶ್ ಕುಟುಂಬಸ್ಥರು ಮನೆ ತುಂಬಿಸಿಕೊಂಡಿದ್ದಾರೆ.
ಮದುವೆ ದಿನವೇ ಪರೀಕ್ಷೆ ಬರೆದ ವಿದ್ಯಾರ್ಥಿನಿ ಐಶ್ವರ್ಯ ಹಾಗೂ ಈಕೆಗೆ ಸಹಕಾರ ನೀಡಿದ ಪಾಲಕರಿಗೆ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ಎಸ್‍ಟಿಜಿ ಶಿಕ್ಷಣ ಸಂಸ್ಥೆಯ ಸಿಇಒ ಸಿ.ಪಿ.ಶಿವರಾಜು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.