ಮನೆ ಕ್ರೀಡೆ ಈ 4 ತಂಡಗಳು ಪ್ಲೇಆಫ್ ಪ್ರವೇಶಿಸುವುದು ಖಚಿತ: ರಾಬಿನ್ ಉತ್ತಪ್ಪ

ಈ 4 ತಂಡಗಳು ಪ್ಲೇಆಫ್ ಪ್ರವೇಶಿಸುವುದು ಖಚಿತ: ರಾಬಿನ್ ಉತ್ತಪ್ಪ

0

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ರಂಗೇರಿದೆ. ಈಗಾಗಲೇ 10 ತಂಡಗಳು ತಲಾ ಒಂದೊಂದು ಪಂದ್ಯವಾಡಿದ್ದು, ಎಲ್ಲಾ ಪಂದ್ಯಗಳಲ್ಲೂ ಭರ್ಜರಿ ಪೈಪೋಟಿ ಕಂಡು ಬಂದಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಈ ಸಲ ಪ್ಲೇಆಫ್ ಹಂತಕ್ಕೇರಲಿರುವ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ.

ಚಾನೆಲ್​ ಚರ್ಚೆಯೊಂದರಲ್ಲಿ ಮಾತನಾಡಿದ ಉತ್ತಪ್ಪ, ಈ ಸಲ ರಾಜಸ್ಥಾನ್ ರಾಯಲ್ಸ್ ತಂಡ ಕಪ್ ಗೆಲ್ಲುವ ನಿರೀಕ್ಷೆಯಿದೆ ಎಂದಿದ್ದಾರೆ. ಏಕೆಂದರೆ ಸಂಜು ಸ್ಯಾಮ್ಸನ್ ನೇತತ್ವದ ರಾಯಲ್ಸ್ ಪಡೆ ಕಳೆದ ಕೆಲ ಸೀಸನ್ ​ಗಳಿಂದ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ಹಂತಕ್ಕೇರುವುದು ಖಚಿತ. ಅಲ್ಲದೆ ಈ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಹಾಗೆಯೇ ಪ್ಲೇಆಫ್ ಹಂತಕ್ಕೇರುವ 2ನೇ ತಂಡವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಸಿಎಸ್ ​ಕೆ ತಂಡದ ನಾಯಕ ಬದಲಾದರೂ ರುತುರಾಜ್ ಗಾಯಕ್ವಾಡ್​ಗೆ ಮಹೇಂದ್ರ ಸಿಂಗ್ ಧೋನಿಯ ಬೆಂಬಲ ಸಿಗಲಿದೆ. ಹೀಗಾಗಿ ಸಿಎಸ್​ಕೆ ತಂಡವನ್ನು ಕೂಡ ಪ್ಲೇಆಫ್ ಹಂತದಲ್ಲಿ ಎದುರು ನೋಡಬಹುದು.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಪ್ಲೇಆಫ್ ಹಂತಕ್ಕೇರಲಿದೆ. ಏಕೆಂದರೆ ಆರ್​ಸಿಬಿ ತಂಡವು ಬಲಿಷ್ಠ ದಾಂಡಿಗರ ಬಳಗವನ್ನೇ ಹೊಂದಿದ್ದು, ಈ ಆಟಗಾರರು ಫಾರ್ಮ್ ಪ್ರದರ್ಶಿಸಿ ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ವಿಶ್ವಾಸವಿದೆ ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.

ಹಾಗೆಯೇ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿರುವ ಮುಂಬೈ ಇಂಡಿಯನ್ಸ್ ತಂಡ ಕೂಡ ಪ್ಲೇಆಫ್ ಪ್ರವೇಶಿಸಲಿದೆ. ಏಕೆಂದರೆ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಸತತ 2 ಬಾರಿ ಫೈನಲ್ ಆಡಿದೆ. ಹೀಗಾಗಿ ಬಲಿಷ್ಠ ಮುಂಬೈ ಪಡೆಯನ್ನು ಸಹ ಅವರು ಪ್ಲೇಆಫ್​ ಗೆ ಕೊಂಡೊಯ್ಯುವುದರಲ್ಲಿ ಅನುಮಾನ ಬೇಡ ಎಂದಿದ್ದಾರೆ ರಾಬಿನ್ ಉತ್ತಪ್ಪ.

ರಾಬಿನ್ ಉತ್ತಪ್ಪ ಅವರ ಹೇಳಿಕೆಯಂತೆ, ಈ ಸಲ ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಪ್ಲೇಆಫ್ ಪ್ರವೇಶಿಸಲಿದೆ. ಅದರಂತೆ ಈ ನಾಲ್ಕು ತಂಡಗಳು ಈ ಬಾರಿ ನಾಕೌಟ್ ಪಂದ್ಯಗಳನ್ನಾಡಲಿದೆಯಾ? ರಾಬಿನ್ ಉತ್ತಪ್ಪ ಅವರ ಭವಿಷ್ಯವು ನಿಜವಾಗಲಿದೆಯಾ ಕಾದು ನೋಡಬೇಕಿದೆ.