ಮನೆ ರಾಜಕೀಯ ಮಕ್ಕಳಿಗೆ ಪ್ರೀತಿಯಿಂದ ಸ್ವಾಗತ ಕೋರಿ ಶಿಕ್ಷಕರಿಗೆ ಹೆಚ್ ಡಿಕೆ ಅಭಿನಂದನೆ

ಮಕ್ಕಳಿಗೆ ಪ್ರೀತಿಯಿಂದ ಸ್ವಾಗತ ಕೋರಿ ಶಿಕ್ಷಕರಿಗೆ ಹೆಚ್ ಡಿಕೆ ಅಭಿನಂದನೆ

0

ಬೆಂಗಳೂರು(Bengaluru): ಮಕ್ಕಳು ನಲಿಯುತ್ತಾ ಶಾಲೆಗೆ ಬಂದ ದೃಶ್ಯಗಳನ್ನು ಕಂಡು ನನ್ನ ಮನಸ್ಸು ಪುಳಕಿತವಾಗಿದೆ. ನನ್ನ ಬಾಲ್ಯದ ದಿನಗಳು ನೆನಪಾದವು. ಅಪ್ಪ-ಅಮ್ಮನ ಬೆರಳಿಡಿದು ತರಗತಿಗಳತ್ತ ಬಂದ ಚಿಣ್ಣರ ಸಂಭ್ರಮ ಇಡೀ ನಾಡಿಗೆ ಹೊಸಕಳೆ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಇಂದು ಟ್ವೀಟ್ ಮಾಡಿರುವ ಅವರು, ಶಾಲೆಗೆ ಬಂದ ಮಕ್ಕಳನ್ನು ಪ್ರೀತಿಯಿಂದ ಬರಮಾಡಿಕೊಂಡು ಸ್ವಾಗತಿಸಿದ ಸಮಸ್ತ ಶಿಕ್ಷಕ ಬಂಧುಗಳಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಮಕ್ಕಳ ಜತೆ ಮಕ್ಕಳಾಗಿ ಶಿಕ್ಷಕರು ವಹಿಸುವ ಜವಾವ್ದಾರಿ ಮಹತ್ವದ್ದು. ಕೋವಿಡ್‌ʼನಿಂದ ಬಳಲಿದ ಕಲಿಕಾ ವ್ಯವಸ್ಥೆಗೆ ನವಚೈತನ್ಯ ತುಂಬಿದವರೂ ಇವರೇ. ಅವರ ಸಮಸ್ಯೆ-ಬೇಡಿಕೆಗಳ ಬಗ್ಗೆ ರಾಜ್ಯ ಸರಕಾರ ಉದಾಸೀನ ಮಾಡಬಾರದು ಎಂದಿದ್ದಾರೆ.

ಮಕ್ಕಳು ಕಲಿಯಲು ಉತ್ತಮ ವಾತಾವರಣ ಕಲ್ಪಿಸಿ: ಶಿಕ್ಷಣ ಇಲಾಖೆ ಅಧಿಕಾರಿಗಳು ಕಚೇರಿಗಳಲ್ಲಿ ಕೂತರೆ ಉಪಯೋಗವಿಲ್ಲ. ಶಾಲೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕುಂದುಕೊರತೆಗಳನ್ನು ನೀಗಿಸಬೇಕು. ಸ್ವಚ್ಛತೆ-ನೈರ್ಮಲ್ಯ, ಮೂಲಸೌಕರ್ಯಗಳನ್ನು ಉತ್ತಮಪಡಿಸಲು ಶ್ರಮಿಸಬೇಕು. ಗ್ರಾಮೀಣ ಭಾಗದ ಅನೇಕ ಕಡೆ ಶಾಲಾ ಕಟ್ಟಡಗಳು ಶಿಥಿಲವಾಗಿವೆ. ಮಳೆ ಬಂದರೆ ಹಳ್ಳಿಶಾಲೆಗಳು ಸೋರುತ್ತಿವೆ. ಕಿಟಕಿ ಬಾಗಿಲುಗಳೇ ಇಲ್ಲದ ದೃಶ್ಯಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಉತ್ತಮ ವಾತಾವರಣದಲ್ಲಿ ಮಕ್ಕಳು ಕಲಿಯುವ ವ್ಯವಸ್ಥೆ ಕಲ್ಪಿಸಬೇಕು. ಇದು ರಾಜ್ಯ ಸರಕಾರದ ಹೊಣೆ ಎಂದು ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.