ಬೆಂಗಳೂರು: ಕರ್ನಾಟಕ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಅವರ ಅಧಿಕಾರಾವಧಿ ಜುಲೈ 31ಕ್ಕೆ ಮುಕ್ತಾಯವಾಗಲಿದ್ದು, ರಜನೀಶ್ ಪತ್ನಿ ಶಾಲಿನಿ ರಜನೀಶ್ ಅವರು ಮುಂದಿನ ನೂತನ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಯಾಗಲಿದ್ದಾರೆ.
ಇಂದು (ಜುಲೈ 26) ನಡೆದ ಸಚಿವ ಸಂಪುಟದಲ್ಲಿ ಶಾಲಿನಿ ರಜನೀಶ್ರನ್ನು ಸರ್ಕಾರದ ಸಿಎಸ್ ಆಗಿ ಮಾಡಲು ತೀರ್ಮಾನಿಸಿದೆ. ಸಚಿವ ಸಂಪುಟ ಸಭೆ ಬಳಿಕ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಕೆ ಪಾಟೀಲ್, ಹಾಲಿ ಸಿಎಸ್ (ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ) ರಜನೀಶ್ ಗೋಯಲ್ 5 ದಿನದಲ್ಲಿ ನಿವೃತ್ತಿ ಆಗುತ್ತಾರೆ. ಹೀಗಾಗಿ ನೂತನ ಸಿಎಸ್ ಆಗಿ ಶಾಲಿನಿ ರಜನೀಶ್ರನ್ನು ನೇಮಿಸಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಅಧಿಕೃತ ಮಾಹಿತಿ ನೀಡಿದರು.
ರಾಜ್ಯ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಅವರ ಅಧಿಕಾರಾವಧಿ ಜುಲೈ 31ಕ್ಕೆ ಮುಕ್ತಾಯವಾಗಲಿದ್ದು, ನೂತನ ಕಾರ್ಯದರ್ಶಿ ಯಾರು ಎಂಬ ಚರ್ಚೆ ನಡೆದಿತ್ತು. ಜ್ಯೇಷ್ಠತೆಯಲ್ಲಿ ಕ್ರಮವಾಗಿ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅಜಯ್ ಸೇಠ್, ಅಭಿವೃದ್ಧಿ ಆಯುಕ್ತರಾಗಿರುವ ಶಾಲಿನಿ ರಜನೀಶ್ ಅವರ ಹೆಸರುಗಳು ಕೇಳಿಬಂದಿದ್ದವು. ಆದ್ರೆ, ಇಬ್ಬರ ಪೈಕಿ ಶಾಲಿನಿ ರಜನೀಶ್ ಅವರೇ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸುವ ಸಾಧ್ಯತೆ ದಟ್ಟವಾಗಿತ್ತು. ಇದೀಗ ಶಾಲಿನಿ ರಜನೀಶ್ ಅವರು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗುವುದು ಖಚಿತವಾಗಿದೆ. 1989ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರು 2027ರ ಜೂನ್ ಅಂತ್ಯಕ್ಕೆ ನಿವೃತ್ತರಾಗಲಿದ್ದಾರೆ.
ಇನ್ನು ಮುಖ್ಯ ಕಾರ್ಯದರ್ಶಿ ಹುದ್ದೆಗೇರಿದರೆ ದಂಪತಿಯ ಸಾಲಿಗೆ ರಜನೀಶ್ ಗೋಯೆಲ್, ಶಾಲಿನಿ ರಜನೀಶ್ ಸೇರಿದ್ದಾರೆ. ಈ ಹಿಂದೆ ಬಿಕೆ ಭಟ್ಟಾಚಾರ್ಯ ಹಾಗೂ ತೆರೆಸಾ ಭಟ್ಟಾಚಾರ್ಯ ದಂಪತಿ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ್ದರು.