ಹಾಸನ (Hassan)- ಜಿಲ್ಲೆ ಅರಸೀಕೆರೆಯ ಐತಿಹಾಸಿಕ ಮಾಲೇಕಲ್ ತಿರುಪತಿ ವಸ್ತು ಸಂಗ್ರಹಾಲಯದಲ್ಲಿ ನಿರ್ಮಾಣ ಹಂತದಲ್ಲಿದ್ದ ದೇವರ ವಿಗ್ರಹಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಪೊಲೀಸರ ಎರಡು ಪ್ರತ್ಯೇಕ ತಂಡವನ್ನು ರಚಿಸಲಾಗಿದೆ.
ಚಿಕ್ಕ ತಿರುಪತಿ ಎಂದೇ ಪ್ರಸಿದ್ಧವಾಗಿರುವ ಮಾಲೆಕಲ್ ಅಮರಗಿರಿ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದ ಆವರಣದಲ್ಲಿರುವ ವಸ್ತು ಸಂಗ್ರಹಾಲಯದಲ್ಲಿ ನಿರ್ಮಾಣ ಹಂತದಲ್ಲಿದ್ದ ವಿಗ್ರಹಗಳನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದ ಘಟನೆ ಸೋಮವಾರ ನಡೆದಿತ್ತು. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು.
ಸೋಮವಾರ ಸಂಜೆ ದೇವಾಲಯ ಬಳಿಗೆ ಆಗಮಿಸಿದ ಕಿಡಿಗೇಡಿಗಳು, ಕಲ್ಯಾಣಿಯಲ್ಲಿ ಈಜಿ ಬಿಸಿಲಿನ ತಾಪ ತಣಿಸಿಕೊಂಡಿದ್ದಾರೆ. ಬಳಿಕ ದೇವಾಲಯದ ಆವರಣದಲ್ಲೇ ಮದ್ಯಪಾನ ಮಾಡಿದ್ದಾರೆ. ಇದನ್ನ ಪ್ರಶ್ನೆ ಮಾಡಿದ ಕೂಲಿ ಕಾರ್ಮಿಕರನ್ನು ಹೆದರಿಸಿ ಅಲ್ಲಿಂದ ಓಡಿಸಿದ್ದಾರೆ. ಬಳಿಕ ದೇವಾಲಯದ ವಸ್ತು ಸಂಗ್ರಹಾಲಯಕ್ಕೆ ಹೋದ ದುಷ್ಕರ್ಮಿಗಳು, ವಸ್ತು ಸಂಗ್ರಹಾಲಯದಲ್ಲಿ ನಿರ್ಮಾಣವಾಗುತ್ತಿದ್ದ ಹಾಗೂ ನಿರ್ಮಾಣವಾಗಿದ್ದ ಹಿಂದೂ ದೇವರ ಮೂರ್ತಿಗಳನ್ನು ಮನಸ್ಸೋ ಇಚ್ಛೆ ತುಂಡರಿಸಿದ್ದಾರೆ. ಇದು ಕೆಲ ಸ್ಥಳೀಯರ ಕಣ್ಣಿಗೆ ಬೀಳುತ್ತಿದ್ದಂತೆಯೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಲೇ ಎಸ್. ಪಿ. ಆರ್. ಶ್ರೀನಿವಾಸ ಗೌಡ, ಡಿವೈಎಸ್ಪಿ ಅಶೋಕ್, ಗ್ರಾಮಾಂತರ ವೃತ್ತ ನಿರೀಕ್ಷಕ ವಸಂತ್ ಕೆ. ಎಂ., ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಎರಡು ಪೊಲೀಸರ ತಂಡವನ್ನು ರಚಿಸಿದ್ದಾರೆ.