ಮಡಿಕೇರಿ : ದುಬಾರೆ ಆನೆ ಕ್ಯಾಂಪ್‌ನಲ್ಲಿ ಪ್ರವಾಸಿ ಮಹಿಳೆ ಹಾಗೂ ಸಾಕಾನೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಧಿಸಿದಂತೆ ಇಬ್ಬರು ಅರಣ್ಯ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಸೋಮವಾರಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಎ ಹಾಗೂ ಕುಶಾಲನಗರ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ ರಕ್ಷಿತ್ ವಿರುದ್ಧ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಪ್ರಕರಣ ದಾಖಲಿಸಿದ್ದಾರೆ.
ಮೇ 18ರಂದು ದುಬಾರೆ ಸಾಕಾನೆ ಶಿಬಿರದಲ್ಲಿ ಎರಡು ಆನೆಗಳ ನಡುವೆ ನಡೆದ ಕಾದಾಟದ ವೇಳೆ ತಮಿಳುನಾಡಿನ 33 ವರ್ಷದ ಪ್ರವಾಸಿ ಮಹಿಳೆ ಜುನೇಷೆ ಎಸ್ ಮೃತಪಟ್ಟಿದ್ದಳು. ಇದೇ ಘಟನೆ ವೇಳೆ ಮಾರ್ತಾಡ ಎಂಬ ಸಾಕಾನೆ ಕೂಡ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿತ್ತು. ಈ ಘಟನೆ ಅರಣ್ಯ ಅಧಿಕಾರಿಗಳ ವೈಫಲ್ಯ ಮತ್ತು ನಿರ್ಲಕ್ಷ್ಯದ ಪರಿಣಾಮವಾಗಿದೆ ಎಂದು ನ್ಯಾಯಮೂರ್ತಿ ಫಣೀಂದ್ರ ಅಭಿಪ್ರಾಯಪಟ್ಟಿದ್ದಾರೆ. ದುಬಾರೆ ಸಾಕಾನೆ ಶಿಬಿರದಲ್ಲಿ ಹಲವು ಗಂಭೀರ ಸಮಸ್ಯೆಗಳಿದ್ದು, ಅವುಗಳನ್ನು ತಕ್ಷಣ ಪರಿಹರಿಸಬೇಕಿದೆ ಎಂದು ಅವರು ಸೂಚಿಸಿದ್ದಾರೆ.
ಮಾಧ್ಯಮ ವರದಿಗಳನ್ನು ಆಧಾರವನ್ನಾಗಿ ಪಡೆದು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವ ಉಪ ಲೋಕಾಯುಕ್ತ, ಈ ಘಟನೆ ಜೀವಿಸುವ ಹಕ್ಕಿಗೆ ಸಂಬಂಧಿಸಿದ ಸಂವಿಧಾನದ 21ನೇ ವಿಧಿಯ ಉಲ್ಲಂಘನೆ ಎಂದು ಉಲ್ಲೇಖಿಸಿದ್ದಾರೆ. ಜನರ ಸುರಕ್ಷತೆ ಕಾಪಾಡುವುದು ಅಧಿಕಾರಿಗಳ ಜವಾಬ್ದಾರಿ ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನೂ ಅವರು ಪ್ರಸ್ತಾಪಿಸಿದ್ದಾರೆ. ಜೂನ್ 24ರೊಳಗೆ ಸಂಬಂಧಿತ ಅರಣ್ಯ ಅಧಿಕಾರಿಗಳು ವೈಯಕ್ತಿಕವಾಗಿ ತಮ್ಮ ವಿವರಣೆ ಸಲ್ಲಿಸುವಂತೆ ಉಪ ಲೋಕಾಯುಕ್ತ ಆದೇಶ ನೀಡಿದ್ದಾರೆ.

















