ಚೆನ್ನೈ(ತಮಿಳುನಾಡು) ಇಲ್ಲಿನ ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಶ್ರೀನಿವಾಸ ಸೇತುಪತಿ ಅವರು ಸಚಿವ ಪೆರಿಯಕರುಪ್ಪನ್ ಅವರನ್ನು ಕೇವಲ ಒಂದು ಮತದ ಅಂತರದಿಂದ ಸೋಲಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಶಿವಗಂಗಾ ಜಿಲ್ಲೆಯಲ್ಲಿ ನೆಲೆಗೊಂಡಿರುವ ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರ ಮಹತ್ವದ ಚುನಾವಣಾ ಜಿಲ್ಲೆಯಾಗಿದ್ದು, ಆಧ್ಯಾತ್ಮಿಕ ಮತ್ತು ಐತಿಹಾಸಿಕ ಪರಂಪರೆಯಿಂದಲೂ ಸಮೃದ್ಧವಾಗಿದೆ. ಇದು ಶಿವಗಂಗಾ ಸಂಸದೀಯ ಕ್ಷೇತ್ರದ ಅಡಿಯಲ್ಲಿ ಬರುತ್ತದೆ ಎನ್ನಲಾಗಿದೆ.
ತಿರುಪ್ಪತ್ತೂರು ಕ್ಷೇತ್ರವನ್ನು ಡಿಎಂಕೆಯ ಭದ್ರಕೋಟೆ ಎಂದೇ ವ್ಯಾಪಕವಾಗಿ ಪರಿಗಣಿಸಲಾಗಿದೆ. ಈ ಕ್ಷೇತ್ರದಲ್ಲಿ ಡಿಎಂಕೆ 8 ಬಾರಿ ಜಯಗಳಿಸಿತ್ತು. ಆದರೆ ಇದೇ ಮೊದಲ ಬಾರಿಗೆ ಚುನಾವಣೆಗೆ ಇಳಿದಿರುವ ಟಿವಿಕೆ ಪಕ್ಷವು ಡಿಎಂಕೆ ಕೋಟೆಯನ್ನು ಛಿದ್ರಗೊಳಿಸಿದೆ ಎನ್ನಲಾಗುತ್ತಿದೆ. ಇದರಿಂದ ಮತ ಎಣಿಕೆ ಪ್ರಕ್ರಿಯೆಯಲ್ಲಿ, ಮೊದಲ ಮೂರು ಸುತ್ತುಗಳು ಪೂರ್ಣಗೊಳ್ಳುವವರೆಗೆ ಡಿಎಂಕೆ ಅಭ್ಯರ್ಥಿ ಪೆರಿಯಕರುಪ್ಪನ್ 10,533 ಮತಗಳನ್ನು ಪಡೆದಿದ್ದರು. ಟಿವಿಕೆ ಅಭ್ಯರ್ಥಿ ಶ್ರೀನಿವಾಸ ಸೇತುಪತಿ 8,861 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಬಿಜೆಪಿ ಅಭ್ಯರ್ಥಿ ತಿರುಮಾರನ್ 4,175 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರು. ಬಳಿಕ ಇಬ್ಬರ ಮಧ್ಯೆ ನೇರಾನೇರ ಸ್ಪರ್ಧೆ ಏರ್ಪಟ್ಟಿತ್ತು. 30ನೇ ಸುತ್ತಿನ ಕೊನೆಯಲ್ಲಿ ಪೆರಿಯಕರುಪ್ಪನ್ 83,374 ಮತಗಳನ್ನು ಪಡೆದರೆ, ಶ್ರೀನಿವಾಸ ಸೇತುಪತಿ 83,375 ಮತಗಳನ್ನು ಗಳಿಸಿದರು. ಇದರಿಂದಾಗಿ ತಿರುಪ್ಪತ್ತೂರು ಕ್ಷೇತ್ರವನ್ನು ಕೇವಲ ಒಂದು ಮತದ ಅಂತರದಿಂದ ಟಿವಿಕೆ ಜಯ ಪಡೆದುಕೊಂಡಿರುವುದಾಗಿದೆ ಎನ್ನಬಹುದು .
ಆದರೆ ಡಿಎಂಕೆಯ ಹಾಲಿ ಸಚಿವ ಮತ್ತು ನಾಲ್ಕು ಬಾರಿ ಸತತವಾಗಿ ಗೆದ್ದಿದ್ದ ಕೆ.ಆರ್.ಪೆರಿಯಕರುಪ್ಪನ್ ಅವರು ಈ ಬಾರಿಯೂ ತಿರುಪ್ಪತ್ತೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಆದರೆ ಈ ಸಲ ಮತದಾರರು 1 ಮತದಿಂದ ಸೋಲಿಸಿದ್ದಾರೆ. ಈ ಮೂಲಕ ಸತತ ಐದನೇ ಬಾರಿ ಗೆಲ್ಲುವ ಕನಸು ನನಸಾಗಲಿಲ್ಲ. ಈ ಮೂಲಕ ಶಿವಗಂಗಾ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ಶಿವಗಂಗಾ, ಮಾನಾಮದುರೈ, ಕಾರೈಕುಡಿ ಮತ್ತು ತಿರುಪ್ಪತ್ತೂರುಗಳನ್ನು ಟಿವಿಕೆ ವಶಪಡಿಸಿಕೊಂಡಿತು ಎನ್ನಲಾಗಿದೆ.
















