ಮನೆ ಸುದ್ದಿ ಜಾಲ ಪತ್ರಕರ್ತರು ಪೂರ್ವಗ್ರಹಪೀಡಿತರಾಗಿ ವರ್ತಿಸಿದರೆ ಮಾನ್ಯತೆ ರದ್ದು: ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಪತ್ರಕರ್ತರು ಪೂರ್ವಗ್ರಹಪೀಡಿತರಾಗಿ ವರ್ತಿಸಿದರೆ ಮಾನ್ಯತೆ ರದ್ದು: ವಾರ್ತಾ ಮತ್ತು ಪ್ರಸಾರ ಸಚಿವಾಲಯ

0

ನವದೆಹಲಿ: ರಾಷ್ಟ್ರದ ಭದ್ರತೆ, ಸಾರ್ವಭೌಮತೆ ಹಾಗೂ ಏಕತೆಯಲ್ಲದೇ, ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ವಿಷಯದಲ್ಲಿ ಪತ್ರಕರ್ತರು ಪೂರ್ವಗ್ರಹಪೀಡಿತರಂತೆ ನಡೆದುಕೊಂಡರೆ  ಸರ್ಕಾರ ನೀಡಿರುವ ಮಾನ್ಯತೆಯನ್ನು ರದ್ದುಗೊಳಿಸಬಹುದು ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ತನ್ನ ನೂತನ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಸಚಿವಾಲಯ ಸೋಮವಾರ ಬಿಡುಗಡೆ ಮಾಡಿರುವ ‘ಕೇಂದ್ರೀಯ ಮಾಧ್ಯಮ ಮಾನ್ಯತೆ ಮಾರ್ಗಸೂಚಿಗಳು–2022’ರಲ್ಲಿ ಉಲ್ಲೇಖಿಸಿರುವ ನೂತನ ಮಾರ್ಗಸೂಚಿಗಳಲ್ಲಿ ಈ ವಿಷಯ ತಿಳಿಸಲಾಗಿದೆ.

ಮಿತ್ರ ರಾಷ್ಟ್ರಗಳೊಂದಿಗಿನ ಸಂಬಂಧಗಳ ಮೇಲೆ ಪರಿಣಾಮ ಬೀರುವುದು, ನ್ಯಾಯಾಂಗ ನಿಂದನೆ, ಮಾನನಷ್ಟ ಅಥವಾ ಅಪರಾಧಕ್ಕೆ ಪ್ರಚೋದಿಸುವಂತಹ ವಿಷಯಗಳಿಗೆ ಸಂಬಂಧಿಸಿದಂತೆಯೂ ಪತ್ರಕರ್ತರು ಪೂರ್ವಗ್ರಹಪೀಡಿತರಂತೆ ವರ್ತಿಸಬಾರದು. ಇಂಥ ವರ್ತನೆ ಕಂಡುಬಂದಲ್ಲಿ ಅವರಿಗೆ ನೀಡಿರುವ ಮಾನ್ಯತೆಯನ್ನು ರದ್ದುಗೊಳಿಸಬಹುದಾಗಿದೆ ಎಂದು ಈ ನೂತನ ನೀತಿಯಲ್ಲಿ ತಿಳಿಸಲಾಗಿದೆ.

ಆನ್‌ಲೈನ್‌ ಸುದ್ದಿ ವೇದಿಕೆಗಳಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಲಾಗಿದೆ. ಸುದ್ದಿಗಳನ್ನು ಸಂಗ್ರಹಿಸಿ, ಜನರಿಗೆ ಒದಗಿಸುವ ಕಾರ್ಯದಲ್ಲಿ ನಿರತರಾದವರನ್ನು (ಅಗ್ರಿಗೇಟರ್) ಮಾನ್ಯತೆಗಾಗಿ ಪರಿಗಣಿಸುವುದಿಲ್ಲ ಎಂದೂ ಸಚಿವಾಲಯ ತಿಳಿಸಿದೆ.

ಮಾನ್ಯತೆಯನ್ನು ಪಡೆದಿರುವ ಮಾಧ್ಯಮ ಪ್ರತಿನಿಧಿಗಳು ಸಾರ್ವಜನಿಕ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿನ ತಮ್ಮ ವೈಯಕ್ತಿಕ ವಿವರಗಳಲ್ಲಿ, ವಿಸಿಟಿಂಗ್‌ ಕಾರ್ಡ್‌ಗಳಲ್ಲಿ, ಲೆಟರ್‌ ಹೆಡ್‌ಗಳಲ್ಲಿ ಅಥವಾ ಯಾವುದೇ ಮುದ್ರಿತ ಸಾಮಗ್ರಿಗಳಲ್ಲಿ ‘ಭಾರತ ಸರ್ಕಾರದಿಂದ ಮಾನ್ಯತೆ ಹೊಂದಲಾಗಿದೆ ಎಂಬುದಾಗಿ ಬರೆದುಕೊಳ್ಳುವಂತಿಲ್ಲ ಎಂದೂ ಸಚಿವಾಲಯ ಸ್ಪಷ್ಟಪಡಿಸಿದೆ.

ಹಿಂದಿನ ಲೇಖನಆಸ್ಪತ್ರೆಯಿಂದ ಇಂದು ಶಾಸಕ ತನ್ವೀರ್ ಸೇಠ್ ಡಿಸ್ಚಾರ್ಜ್: ಅಭಿಮಾನಿಗಳಿಂದ ವಿಶೇಷ ಪೂಜೆ
ಮುಂದಿನ ಲೇಖನಕೊರೊನಾದಿಂದ ಪತಿಯನ್ನು ಕಳೆದುಕೊಂಡವಳಿಗೆ ಬಾಳು ಕೊಟ್ಟ ಪತಿಯ ಸ್ನೇಹಿತ