ಮನೆ ಮನರಂಜನೆ ಅಮೃತವರ್ಷಿಣಿ ಖ್ಯಾತಿಯ ನಟ ಶರತ್ ಬಾಬು ನಿಧನ

ಅಮೃತವರ್ಷಿಣಿ ಖ್ಯಾತಿಯ ನಟ ಶರತ್ ಬಾಬು ನಿಧನ

0

ಕನ್ನಡದ ಅಮೃತವರ್ಷಿಣಿ  ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟ ಶರತ್ ಬಾಬು ಇಂದು (ಮೇ 22) ರಂದು ಹೈದರಾಬಾದ್ನಲ್ಲಿ ಕೊನೆ ಉಸಿರೆಳೆದಿದ್ದಾರೆ.

Join Our Whatsapp Group

ಅವರಿಗೆ 71 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆಗೆ ಸ್ಪಂದಿಸದೆ ಇಂದು ನಿಧನ ಹೊಂದಿದ್ದಾರೆ.

ಶರತ್ ಬಾಬು ಅವರನ್ನು ಏಪ್ರಿಲ್ ಮೊದಲ ವಾರದಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ತುಸು ಚೇತರಿಸಿಕೊಂಡ ಬಳಿಕ ಅವರನ್ನು ಹೈದರಾಬಾದ್ ಗೆ ಕರೆದೊಯ್ಯಲಾಗಿತ್ತು. ಅದಾದ ಬಳಿಕ ಅಲ್ಲಿ ಮತ್ತೆ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಏಪ್ರಿಲ್ 20 ರ ಸುಮಾರಿಗೆ ಹೈದರಾಬಾದ್ ನ ಗಚ್ಚಿಬೌಲಿಯ ಎಐಜಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಐಸಿಯು ವಾರ್ಡ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ವೈದ್ಯರ ಸತತ ಪ್ರಯತ್ನಗಳು ಫಲನೀಡದೆ ಶರತ್ ಬಾಬು ಇಹಲೋಕ ತ್ಯಜಿಸಿದ್ದಾರೆ.

1973 ರಲ್ಲಿ ಚಿತ್ರರಂಗ ಪ್ರವೇಶಿಸಿದ ಶರತ್ ಬಾಬು ತೆಲುಗು, ತಮಿಳು ಚಿತ್ರರಂಗದಲ್ಲಿ ಬಹು ಜನಪ್ರಿಯ ನಟರಾಗಿದ್ದವರು. ಸಿನಿಮಾ ನಾಯಕನಾಗಿ, ಎರಡನೇ ನಾಯಕನಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದು ಸಮಯದಲ್ಲಿ ಸ್ಟಾರ್ ಆಗಿ ಸಹ ಮೆರೆದಿದ್ದಾರೆ. ರಜನೀಕಾಂತ್ ಜೊತೆಗೆ ಮುತ್ತು, ಅರುಣಾಚಲಂ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಶರತ್ ಬಾಬು ನಟಿಸಿದ್ದಾರೆ. ತಮ್ಮ 40 ವರ್ಷದ ಸಿನಿ ಬದುಕಿನಲ್ಲಿ ಸುಮಾರು 200 ಕ್ಕೂ ಹೆಚ್ಚು ಪಾತ್ರಗಳಲ್ಲಿ ಶರತ್ ಬಾಬು ನಟಿಸಿದ್ದಾರೆ.

ಕನ್ನಡದ ಹಲವು ಸಿನಿಮಾಗಳಲ್ಲಿ ಶರತ್ ಬಾಬು ನಟಿಸಿದ್ದಾರೆ. ತುಳಸಿದಳ, ರಣಚಂಡಿ, ಶಕ್ತಿ, ಕಂಪನ, ಗಾಯ, ಹೃದಯ-ಹೃದಯ, ನೀಲ, ನಮ್ಮೆಜಮಾನ್ರು, ಅಮೃತವರ್ಷಿಣಿ ಸಿನಿಮಾದಲ್ಲಿ ಪಾತ್ರವನ್ನು ಕನ್ನಡ ಸಿನಿಮಾ ಪ್ರೇಮಿಗಳು ಮರೆಯುವಂತಿಲ್ಲ. ಕನ್ನಡದ ಪ್ರೀತಿಗಾಗಿ ಧಾರಾವಾಹಿಯಲ್ಲಿಯೂ ಶರತ್ ಬಾಬು ನಟಿಸಿದ್ದಾರೆ. ತೆಲುಗು, ತಮಿಳಿನಲ್ಲಿ ಚಿರಂಜೀವಿ, ಕಮಲ್ ಹಾಸನ್ ಇನ್ನೂ ಹಲವು ಮೇರು ಕಲಾವಿದರೊಟ್ಟಿಗೆ ಶರತ್ ಬಾಬು ನಟಿಸಿದ್ದಾರೆ.

ಹಿಂದಿನ ಲೇಖನಸಿಎಂ ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ, ಮಾಧ್ಯಮ ಸಲಹೆಗಾರರ ನೇಮಕ
ಮುಂದಿನ ಲೇಖನಕ್ಷುಲ್ಲಕ ಕಾರಣಕ್ಕೆ ಯುವಕನ ಹತ್ಯೆ