ಚಿಕ್ಕೋಡಿ : ಗಂಡನ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಂಕರಮಠ ಗಲ್ಲಿಯಲ್ಲಿ ನಡೆದಿದೆ. ಸಂಗೀತಾ ಗಾಡಿವಡ್ಡರ (35) ಮೃತ ಗೃಹಿಣಿ. ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ 15 ವರ್ಷಗಳ ಹಿಂದೆ ವೆಂಕಟೇಶ್ ಗಾಡಿವಡ್ಡರ್ ಜೊತೆ ಮೃತ ಸಂಗೀತಾ ವಿವಾಹವಾಗಿದ್ದರು. ಕಳೆದ ಕೆಲ ವರ್ಷಗಳಿಂದ ಗಂಡ ಹಾಗೂ ಹೆಂಡತಿ ನಡುವೆ ಜಗಳವಾಗುತ್ತಿತ್ತು. ಆದರೆ ನಿನ್ನೆ (ಏ.29) ರಾತ್ರಿ ಗಂಡನ ಕಿರುಕುಳ ತಾಳಲಾರದೆ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಂಗೀತಾ ಮನೆಯವರು ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದು, ಮನೆ ಕಟ್ಟಿಕೊಳ್ಳಲು 2 ಲಕ್ಷ ರೂ. ಕೊಡುವಂತೆ ತವರು ಮನೆಯವರಿಗೆ ಕೇಳು ಎಂದು ವೆಂಕಟೇಶ್ ಸಂಗೀತಾಗೆ ಹೇಳಿದ್ದ. ಆದರೆ ಹಣ ನೀಡದಿದ್ದಕ್ಕೆ ಮಗಳಿಗೆ ಹೊಡೆದು, ಬಳಿಕ ನೇಣು ಹಾಕಿದ್ದಾರೆಂದು ಮೃತಳ ತಾಯಿ ಆರೋಪಿಸಿದ್ದಾರೆ. ಈ ಸ್ಥಳಕ್ಕ ಅಥಣಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.














