ಮನೆ ಸುದ್ದಿ ಜಾಲ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತರ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತರ ಪ್ರತಿಭಟನೆ

0

ಎಚ್.ಡಿ.ಕೋಟೆ(H.D.Kote): ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನ ಸೌಧದ ಮುಂಭಾಗ ಬುಧವಾರ ರಾತ್ರಿಯಿಂದ ಗುರುವಾರ ಸಂಜೆವರೆಗೆ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ವಿವಿಧ ಶಾಲೆಗಳ ಬಿಸಿಯೂಟ ನೌಕರರಿಗೆ ನಿವೃತ್ತಿ ವೇತನ ಹಾಗೂ ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿದರು.

ಸಂಘದ ಅಧ್ಯಕ್ಷೆ ಶಿವಮ್ಮ ಮಾತನಾಡಿ, ‘ಮಧ್ಯಾಹ್ನದ ಬಿಸಿಯೂಟ ಯೋಜನೆಯು ಪ್ರಾರಂಭವಾದ ವರ್ಷದಿಂದಲೂ ನೌಕರರು ದುಡಿಯುತ್ತಿದ್ದೇವೆ. ಆದರೆ, ಸರ್ಕಾರ ಸರಿಯಾದ ವೇತನ ನೀಡದೆ ತಾರತಮ್ಯ ಮಾಡುತ್ತಿದೆ’ ಎಂದು ಆರೋಪಿಸಿದರು.

‘2001-02 ರಲ್ಲಿ ಅಡುಗೆ ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳುವಾಗ ವಿದ್ಯಾಭ್ಯಾಸ ಮತ್ತು ವಯಸ್ಸಿನ ಅರ್ಹತೆ ಮಾತ್ರ ನಿಗದಿಮಾಡಲಾಗಿತ್ತು. ಅದರಲ್ಲಿ ನಿವೃತ್ತಿ ವಯಸ್ಸನ್ನು ಸರ್ಕಾರದ ಕೈಪಿಡಿಯಲ್ಲಿ ನಿಗದಿಪಡಿಸಿರಲಿಲ್ಲ. ಅಕ್ಷರದಾಸೋಹ ನೌಕರರ ಸಂಘ (ಸಿಐಟಿಯು) 2016 ರಿಂದಲೂ ವಯಸ್ಸಿನ ಆಧಾರದಲ್ಲಿ ನಿವೃತ್ತಿ ಸೌಲಭ್ಯ ಕೊಡಬೇಕೆಂದು ಹಲವು ಬಾರಿ ಸರ್ಕಾರಕ್ಕೆ ಮತ್ತು ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡರೂ ಈ ಬಗ್ಗೆ ಗಮನಹರಿಸಲಿಲ್ಲ’ ಎಂದು ದೂರಿದರು.

‘ಬಿಸಿಯೂಟ ಯೋಜನೆಯನ್ನು ಮುಂದುವರಿಸಬೇಕು, ಯಾವುದೇ ಖಾಸಗಿ ಸಂಸ್ಥೆಗಳಿಗೆ ಜವಾಬ್ದಾರಿ ಕೊಡಬಾರದು’ ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಮನವಿಯನ್ನು ತಹಶೀಲ್ದಾರ್ ರತ್ನಾಂಬಿಕಾ ಅವರಿಗೆ ನೀಡಲಾಯಿತು.

ಪ್ರತಿಭಟನೆಯಲ್ಲಿ ಶಾಂತಿ, ಲತಾ, ಚಂದ್ರಮ್ಮ, ಭಾಗ್ಯಮ್ಮ, ಚಿನ್ನಮ್ಮ, ಸಾಕಮ್ಮ, ಲೀಲಾವತಿ, ನಾಗಮ್ಮ, ಸುಧಾ, ಶಿವಮ್ಮ, ದೇವಮಣಿ, ಸುಶೀಲಮ್ಮ, ರತ್ನಮ್ಮ, ಬಿ.ಎಂ.ಶಿವಣ್ಣ ಇದ್ದರು.

ಹಿಂದಿನ ಲೇಖನಕೃಷಿ ಸಾಲಕ್ಕೆ ಸಿವಿಲ್ ಸ್ಕೋರ್ ಮಾನದಂಡ ರದ್ದಿಗಾಗಿ ಸರ್ಕಾರಕ್ಕೆ ವರದಿ ಸಲ್ಲಿಕೆ: ಜಿಲ್ಲಾಧಿಕಾರಿ
ಮುಂದಿನ ಲೇಖನಸಿಎಂ ಆಗಬೇಕಾದರೆ ಲಂಚ ಕೊಡಬೇಕೆಂಬ ಯತ್ನಾಳ್ ಆರೋಪ: ತನಿಖೆಗೆ ಡಿಕೆಶಿ ಒತ್ತಾಯ