ಎಚ್.ಡಿ.ಕೋಟೆ: ಸರ್ಕಾರಿ ಶಾಲೆಯ ದಾಖಲಾತಿಯಲ್ಲಿ ಜಾತಿ ವಿವರವನ್ನು ತಿದ್ದುಪಡಿ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಎಚ್.ಡಿ.ಕೋಟೆ ತಾಲೂಕಿನ ರಾಜೇಗೌಡನಹುಂಡಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ ಅಮಾನತುಗೊಂಡಿರುವ ಅಧಿಕಾರಿ.
ಬೋವಿ ಸಮುದಾಯಕ್ಕೆ ಸೇರಿದ ಮಹಿಳೆ ಚಂದ್ರಮ್ಮ ಅವರ ಶಾಲಾ ದಾಖಲೆಯಲ್ಲಿ ಇದ್ದ ‘ಬೋವಿ‘ ಎಂಬ ಜಾತಿ ನಮೂದನ್ನು ‘ಬೋಯಿ‘ ಎಂದು ಬದಲಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಭಾವಿ ರಾಜಕಾರಣಿಯೊಬ್ಬರ ಒತ್ತಡದ ಮೇರೆಗೆ ಈ ತಿದ್ದುಪಡಿ ನಡೆದಿದ್ದು, ಭೂ ವಿವಾದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.

ಜಾತಿ ಪ್ರಮಾಣ ಪತ್ರದೊಂದಿಗೆ ನ್ಯಾಯಕ್ಕಾಗಿ ಹೋರಾಟ
ಚಂದ್ರಮ್ಮ ಹಾಗೂ ಅವರ ಕುಟುಂಬಸ್ಥರು ತಹಶೀಲ್ದಾರ್ ನೀಡಿರುವ ಜಾತಿ ಪ್ರಮಾಣ ಪತ್ರ ಮತ್ತು ಮೂಲ ಶಾಲಾ ದಾಖಲಾತಿಗಳನ್ನು ಸಲ್ಲಿಸಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು.
ಬಿಇಒ ತನಿಖೆಯಲ್ಲಿ ಬಯಲಾದ ಪ್ರಕರಣ
ದೂರು ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ರಾಜು ಅವರು ಶಾಲೆಯ ಮೂಲ ದಾಖಲಾತಿಗಳನ್ನು ಪರಿಶೀಲಿಸಿದ ವೇಳೆ ದಾಖಲೆ ತಿದ್ದುಪಡಿ ನಡೆದಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಬಳಿಕ ಈ ಕುರಿತು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ (ಡಿಡಿಪಿಐ) ವರದಿ ಸಲ್ಲಿಸಲಾಗಿತ್ತು.

ಬಿಇಒ ನೀಡಿದ ವರದಿಯ ಆಧಾರದ ಮೇಲೆ ಕ್ರಮ ಕೈಗೊಂಡ ಡಿಡಿಪಿಐ, ಮುಖ್ಯ ಶಿಕ್ಷಕ ಶ್ರೀನಿವಾಸ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ನಿವೃತ್ತಿಗೆ ಎರಡು ವರ್ಷ ಬಾಕಿ ಇರುವಾಗ ಅಮಾನತು
ಮುಖ್ಯ ಶಿಕ್ಷಕ ಶ್ರೀನಿವಾಸ ಅವರಿಗೆ ನಿವೃತ್ತಿಗೆ ಇನ್ನೂ ಎರಡು ವರ್ಷಗಳಷ್ಟೇ ಬಾಕಿ ಇರುವಾಗ ಅಮಾನತು ಶಿಕ್ಷೆ ಎದುರಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಹೆಚ್ಚಿನ ತನಿಖೆ ಮುಂದುವರಿಸಿದ್ದು, ದಾಖಲೆ ತಿದ್ದುಪಡಿ ನಡೆದಿರುವ ಕುರಿತು ಮತ್ತಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ.
















