ಬೆಂಗಳೂರು, ಜೂನ್ 13: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ದಿನಬಳಕೆಯ ತರಕಾರಿಗಳ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ನಿತ್ಯದ ಆಹಾರದಲ್ಲಿ ಪ್ರಮುಖ ಸ್ಥಾನ ಹೊಂದಿರುವ ಅಕ್ಕಿಯ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದ್ದು, ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ವಿವಿಧ ತಳಿಯ ಅಕ್ಕಿಗಳ ದರವು ಪ್ರತಿ ಕೆಜಿಗೆ 10 ರೂಪಾಯಿಯಿಂದ 20 ರೂಪಾಯಿವರೆಗೆ ಹೆಚ್ಚಳವಾಗಿದೆ. ಇದರಿಂದ ಮಧ್ಯಮ ಹಾಗೂ ಬಡ ವರ್ಗದ ಕುಟುಂಬಗಳ ಮಾಸಿಕ ಬಜೆಟ್ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ.

ಅಕ್ಕಿ ಬೆಲೆ ಏರಿಕೆಗೆ ಕಾರಣಗಳೇನು?
ಮಾರುಕಟ್ಟೆ ವರ್ತಕರ ಪ್ರಕಾರ, ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿಗೆ ಬೇಡಿಕೆ ಹೆಚ್ಚಾಗಿರುವುದರ ನಡುವೆ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಅಕ್ಕಿ ರಫ್ತಿಗೆ ಮುಕ್ತ ಅವಕಾಶ ನೀಡಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಅಕ್ಕಿಯ ಲಭ್ಯತೆ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ದರಗಳು ಏರಿಕೆ ಕಂಡಿವೆ.
ಅಕ್ಕಿ ದರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರು ಖರೀದಿಯ ಪ್ರಮಾಣವನ್ನು ಕಡಿಮೆಗೊಳಿಸಿದ್ದು, ವ್ಯಾಪಾರಿಗಳ ಮಾರಾಟದಲ್ಲೂ ಇಳಿಕೆ ಕಂಡುಬಂದಿದೆ ಎಂದು ವರ್ತಕ ಅರುಣ್ ಪರಮೇಶ್ ತಿಳಿಸಿದ್ದಾರೆ.
ನವೆಂಬರ್ ವರೆಗೂ ಬೆಲೆ ಇಳಿಕೆಯಾಗುವ ಸಾಧ್ಯತೆ ಕಡಿಮೆ
ರೈತರು ಬೆಳೆದಿರುವ ಹೊಸ ಭತ್ತದ ಬೆಳೆ ಕಟಾವಾಗಿ ಮಾರುಕಟ್ಟೆಗೆ ಬರಲು ಇನ್ನೂ ಕನಿಷ್ಠ ನವೆಂಬರ್ ತಿಂಗಳವರೆಗೆ ಸಮಯ ಬೇಕಾಗುತ್ತದೆ. ಅಲ್ಲಿಯವರೆಗೂ ಅಕ್ಕಿಯ ಪೂರೈಕೆ ಕೊರತೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸದ್ಯಕ್ಕೆ ಬೆಲೆ ಇಳಿಕೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರ ಇದೇ ರೀತಿ ಮುಂದುವರಿದರೆ, ಮುಂದಿನ ದಿನಗಳಲ್ಲಿ ಕೆಲವು ಪ್ರೀಮಿಯಂ ತಳಿಯ ಅಕ್ಕಿಗಳ ಬೆಲೆ ಪ್ರತಿ ಕೆಜಿಗೆ 100 ರೂಪಾಯಿ ಗಡಿ ದಾಟುವ ಸಾಧ್ಯತೆಯೂ ಇದೆ ಎಂದು ಅಕ್ಕಿ ವ್ಯಾಪಾರಿ ಸುರೇಶ್ ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆಯಾಗಿ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದು ಜನಸಾಮಾನ್ಯರ ಜೀವನ ನಿರ್ವಹಣೆಯನ್ನು ಮತ್ತಷ್ಟು ಕಷ್ಟಕರವಾಗಿಸಿದೆ. ತರಕಾರಿ, ಇಂಧನ ಹಾಗೂ ಗ್ಯಾಸ್ ಸಿಲಿಂಡರ್ ದರ ಏರಿಕೆಯ ಬೆನ್ನಲ್ಲೇ ಈಗ ಅಕ್ಕಿ ಬೆಲೆಯೂ ಹೆಚ್ಚಳವಾಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
















