ಮನೆ ಸುದ್ದಿ ಜಾಲ ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಸಾವಿಗೆ ಡಿಜಿಪಿ ಅಲೋಕ್ ಕುಮಾರ್ ಕಿರುಕುಳ ಕಾರಣ ಎಂದ ಪತ್ನಿ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಸಾವಿಗೆ ಡಿಜಿಪಿ ಅಲೋಕ್ ಕುಮಾರ್ ಕಿರುಕುಳ ಕಾರಣ ಎಂದ ಪತ್ನಿ

0

ಧಾರವಾಡ: ಸೇವೆಯಿಂದ ಅಮಾನತುಗೊಂಡಿದ್ದ ಧಾರವಾಡ ಕೇಂದ್ರ ಕಾರಾಗೃಹದ ಜೈಲರ್ ಸಿದ್ಧರಾಮಪ್ಪ ವಡ್ಡರ್ (37) ಅವರು ಶುಕ್ರವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧಾರವಾಡದ ಹೊಸ ಬಸ್ ನಿಲ್ದಾಣದ ಸಮೀಪ ಇರುವ ಕಾರಾಗೃಹದ ವಸತಿ ಗೃಹದಲ್ಲಿ ಸಿದ್ಧರಾಮಪ್ಪ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಎರಡು ತಿಂಗಳ ಹಿಂದೆ ಅಮಾನತುಗೊಂಡಿದ್ದ ಸಿದ್ಧರಾಮಪ್ಪ ಅವರನ್ನು ಮೈಸೂರು ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಿದ್ಧರಾಮಪ್ಪ ಅವರ ಪತ್ನಿ ಲಕ್ಷ್ಮಿ, ತಮ್ಮ ಪತಿ ಸಾವಿಗೆ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರ ಕಿರುಕುಳವೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

“ಅಲೋಕ್ ಕುಮಾರ್ ಅವರ ಕಿರುಕುಳದಿಂದಲೇ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲೋಕ್ ಕುಮಾರ್ ಸರ್ ಅವರೇ ನನ್ನ ಗಂಡನ ಜೀವ ಪಡೆದಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನನ್ನ ಪತಿ ಅಮಾನತುಗೊಂಡಿದ್ದರು. ಜೈಲಿಗೆ ಕಳುಹಿಸುತ್ತಾರೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರನ್ನು ಅಮಾನತು ಮಾಡಿ ಮೈಸೂರಿಗೆ ವರ್ಗಾವಣೆ ಮಾಡಲಾಗಿತ್ತು. ಅವರು ಮೈಸೂರಿಗೆ ಕರ್ತವ್ಯಕ್ಕೆ ಹಾಜರಾಗಲು ಸಿದ್ಧತೆ ನಡೆಸಿದ್ದರು. ಆದರೆ ತಂದೆ-ತಾಯಿಯ ಮುಖ ನೋಡಿ ಹೋಗುತ್ತೇನೆ ಎಂದು ಹೇಳಿದ್ದರು. ತಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಆತಂಕದಲ್ಲಿದ್ದರು. ಯಾವಾಗಲೂ ಅಲೋಕ್ ಕುಮಾರ್ ನನ್ನನ್ನು ಜೈಲಿಗೆ ಕಳುಹಿಸುತ್ತಾರೆ ಎಂದು ಹೇಳುತ್ತಿದ್ದರು” ಎಂದು ಲಕ್ಷ್ಮಿ ಆರೋಪಿಸಿದ್ದಾರೆ.

ಅಲೋಕ್ ಕುಮಾರ್ ಅವರ ಭಯ ಮತ್ತು ಮಾನಸಿಕ ಒತ್ತಡದಿಂದಲೇ ಸಿದ್ಧರಾಮಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ದೂರಿದ್ದಾರೆ.

ಅಮಾನತ್ತಾಗಿದ್ದ ಜೈಲರ್

ಜೈಲರ್ ಸಿದ್ಧರಾಮಪ್ಪ ಅವರನ್ನು ಎರಡು ತಿಂಗಳ ಹಿಂದೆ ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿತ್ತು. ಬಳಿಕ ಅವರನ್ನು ಮೈಸೂರು ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಅವರು ಇನ್ನೂ ಮೈಸೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ ಎಂದು ತಿಳಿದು ಬಂದಿದೆ. ಈ ನಡುವೆ ಸಿದ್ಧರಾಮಪ್ಪ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.