ನವದೆಹಲಿ/ಬೆಂಗಳೂರು : ಬೆಂಗಳೂರಿನಲ್ಲಿ ಸಾಲ ವಸೂಲಾತಿ ಮೇಲ್ಮನವಿ ನ್ಯಾಯಮಂಡಳಿ ಸ್ಥಾಪಿಸುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕೇಂದ್ರ ಕಾರ್ಮಿಕ, ಎಂಎಸ್‌ಎಂಇ ರಾಜ್ಯಖಾತೆ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರ ಬರೆದಿರುವ ಅವರು, ಬೆಂಗಳೂರು ದೇಶದ ಪ್ರಮುಖ ಹಣಕಾಸು ಮತ್ತು ವಾಣಿಜ್ಯ ಕೇಂದ್ರವಾಗಿದೆ. ಡಿಆರ್‌ಟಿ ಅಡಿಯಲ್ಲಿ ಉದ್ಭವಿಸುವ ಕೇಸ್‌ಗಳು ಗಣನೀಯ ಪ್ರಮಾಣವನ್ನು ಹೊಂದಿದೆ. ಪ್ರಕರಣಗಳ ಹೆಚ್ಚುತ್ತಿರುವ ಬಾಕಿ ಸಂಖ್ಯೆ ಮತ್ತು ಅಪೀಲ್ ವೇದಿಕೆಯ ಅನಾನುಕೂಲತೆಯು ನಿರ್ಣಯ ಮತ್ತು ಹಣಕಾಸು ಹಕ್ಕುಗಳ ಜಾರಿಯಲ್ಲಿ ವಿಳಂಬಕ್ಕೆ ಕಾರಣವಾಗಿದೆ.
ಡಿಆರ್‌ಟಿ ಅಡಿಯಲ್ಲಿ ದೊಡ್ಡ ಸಂಖ್ಯೆಯ ಪ್ರಕರಣಗಳು ಬರುತ್ತಿವೆ. ಆದರೆ ಅಪೀಲ್‌ಗಳಿಗೆ ಚೆನ್ನೈಗೆ ಪ್ರಯಾಣಿಸುವುದರಿಂದ ನ್ಯಾಯದಲ್ಲಿ ವಿಳಂಬವಾಗುತ್ತಿದೆ. ಬೆಂಗಳೂರಿನಲ್ಲಿ ಡಿಆರ್‌ಎಟಿ ಅನ್ನು ಸ್ಥಾಪಿಸುವುದರಿಂದ ಚೆನ್ನೈ ಡಿಆರ್‌ಟಿ ಮೇಲಿನ ಹೊರೆಯನ್ನು ಗಣನೀಯವಾಗಿ ಕಡಿಮೆಗೊಳಿಸುತ್ತದೆ. ಜೊತೆಗೆ ಅಪೀಲ್‌ಗಳನ್ನು ಸಮಯಕ್ಕೆ ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ವ್ಯವಹರಿಸಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.















