ಮನೆ ಕಾನೂನು ಪತಿಯ ಸಾವಿನಿಂದಾಗಿ ವಿಚ್ಛೇದನ ಡಿಕ್ರಿ ಪ್ರಶ್ನಿಸಿರುವ ಪತ್ನಿಯ ಮೇಲ್ಮನವಿ ರದ್ದಾಗದು: ಹೈಕೋರ್ಟ್‌

ಪತಿಯ ಸಾವಿನಿಂದಾಗಿ ವಿಚ್ಛೇದನ ಡಿಕ್ರಿ ಪ್ರಶ್ನಿಸಿರುವ ಪತ್ನಿಯ ಮೇಲ್ಮನವಿ ರದ್ದಾಗದು: ಹೈಕೋರ್ಟ್‌

0

ಕೌಟುಂಬಿಕ ನ್ಯಾಯಾಲಯವು ಪತಿಯ ಪರವಾಗಿ ವಿಚ್ಛೇದನ ಮಂಜೂರು ಮಾಡಿರುವ ಡಿಕ್ರಿ ಪ್ರಶ್ನಿಸಿ ಪತ್ನಿಯು ಸಲ್ಲಿಸಿರುವ ಮೇಲ್ಮನವಿಯು ಪತಿ ಸಾವನ್ನಪ್ಪಿದರೆ ರದ್ದಾಗುವುದಿಲ್ಲ ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಹೇಳಿದೆ.

Join Our Whatsapp Group

ಪತ್ನಿ ಕ್ರೌರ್ಯ ಎಸಗುತ್ತಿದ್ದಾಳೆ ಎಂದು ಆಕ್ಷೇಪಿಸಿ ಪತಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿ ವಿಚ್ಛೇದನ ಮಂಜೂರು ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್‌ ಮತ್ತು ಅನಂತ್‌ ರಾಮನಾಥ್‌ ಹೆಗ್ಡೆ ಅವರ ನೇತೃತ್ವದ ವಿಭಾಗೀಯ ಪೀಠವು ಬದಿಗೆ ಸರಿಸಿದೆ.

“ಡಿಕ್ರಿ ಹೊಂದಿರುವ ಪತಿ ಸಾವನ್ನಪ್ಪಿದರೂ ಮಾಲೀಕತ್ವದ ಹಕ್ಕುಗಳು ಪರಿಣನೆಗೆ ಬಾಕಿ ಇರುವುದರಿಂದ ಮೇಲ್ಮನವಿ ರದ್ದಾಗಿದೆ ಎಂಬ ಪ್ರತಿವಾದಿ ವಕೀಲರ ವಾದವನ್ನು ಒಪ್ಪಲಾಗದು” ಎಂದು ನ್ಯಾಯಾಲಯ ಹೇಳಿದೆ.

“ಒಟ್ಟಾಗಿ ಜೀವಿಸುವುದಕ್ಕೆ ಪತಿಯಿಂದ ಯಾವುದೇ ಪ್ರಯತ್ನವಾಗಿಲ್ಲ ಮತ್ತು ಪತ್ನಿಯನ್ನು ಮನೆಗೆ ಬರುವಂತೆ ಆಹ್ವಾನಿಸಿಲ್ಲ.‌ ಪತಿ ಸಲ್ಲಿಸಿರುವ ಲೀಗಲ್‌ ನೋಟಿಸ್‌ನಲ್ಲೂ ಒಪ್ಪಿತವಾಗಿ ವಿಚ್ಛೇದನ ನೀಡಬೇಕು ಎಂದು ಹೇಳಲಾಗಿದೆಯೇ ವಿನಾ ಮದುವೆಯಾಗಿರುವ ಮನೆಗೆ ಬರಬೇಕು ಎಂದು ಎಲ್ಲೂ ಹೇಳಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಪತ್ನಿಯು ಉದ್ದೇಶಪೂರ್ವಕವಾಗಿ ಪತಿಯನ್ನು ತೊರೆದಿದ್ದಾಳೆ ಮತ್ತು ಕ್ರೌರ್ಯದ ಆಧಾರದಲ್ಲಿ ಪತಿಗೆ ವಿಚ್ಛೇದನ ಸಿಗಲಿ ಎಂದು ಆಕೆ ಕೆಟ್ಟದಾಗಿ ವರ್ತಿಸಿದ್ದಾಳೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ವೈವಾಹಿಕ ಕ್ರೌರ್ಯ ಎಸಗಿರುವುದು ಸಾಬೀತಾದರೆ ಮಾತ್ರ ವಿಚ್ಛೇದನ ನೀಡಲು ಸಾಧ್ಯ. ಆದರೆ, ಹಾಲಿ ಪ್ರಕರಣದಲ್ಲಿ ಅದು ಸಾಬೀತಾಗಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೇ, “ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿದಾರ ಪತಿಯ ವಿಧವೆ ಸ್ಥಾನಕ್ಕೆ ಮೇಲ್ಮನವಿದಾರ ಪತ್ನಿ ಅರ್ಹವಾಗಿದ್ದಾಳೆ. ಹೀಗಾಗಿ, ಆ ಸ್ಥಾನದ ಎಲ್ಲಾ ಸೌಲಭ್ಯಕ್ಕೆ ಆಕೆ ಅರ್ಹವಾಗಿದ್ದಾಳೆ” ಎಂದು ನ್ಯಾಯಾಲಯ ಹೇಳಿದೆ.

ಪತ್ನಿ ಪರ ವಕೀಲ ಪಿ ಬಿ ಅಜಿತ್‌ ಅವರು “ಪತ್ನಿಯು ಪತಿಯ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಅಕ್ಷರಶಃ ಯಾವುದೇ ದಾಖಲೆಗಳು ಇಲ್ಲ. ಮೇಲ್ಮನವಿದಾರೆ ಪತ್ನಿಯ ತಂದೆಯ ಮೇಲೆ ದೈಹಿಕ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಪತಿ ಹಾಗೂ ಅವರ ಸ್ನೇಹಿತರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆಯೇ ವಿನಾ ಇದನ್ನು ಪತ್ನಿಯು ಪತಿಯ ಮೇಲೆ ಕ್ರೌರ್ಯ ಎಸಗಿದ್ದಾಳೆ ಎನ್ನಲಾಗದು. ಮಗು ಮತ್ತು ತನಗೆ ಜೀವನಾಂಶ ಕೋರಿ ದಾವೆ ಹೂಡುವುದನ್ನು ಕ್ರೌರ್ಯ ಎಂದು ಪರಿಗಣಿಸಲಾಗದು” ಎಂದಿದ್ದರು.

“ಮೇಲ್ಮನವಿ ಬಾಕಿ ಇರುವಾಗ ಪತಿ ಸಾವನ್ನಪ್ಪಿದರೂ ಪತ್ನಿಯ ವಿಧವೆ ಸ್ಥಾನದ ಹಕ್ಕುಗಳು ಹಾಗೂ ಆನಂತರ ಆಸ್ತಿಯ ಮೇಲಿನ ಹಕ್ಕು ಮತ್ತು ನಿವೃತ್ತಿ ಸೌಲಭ್ಯಗಳು ಚಾಲ್ತಿಯಲ್ಲಿರಲಿವೆ” ಎಂದು ವಾದಿಸಿದ್ದರು.

18.07.2022ರಂದು ಪತ್ನಿಯ ಮೇಲ್ಮನವಿ ರದ್ದಾಗಿದೆ ಎಂದು ವಜಾ ಮಾಡಲಾಗಿದೆ. ಅದಾಗ್ಯೂ, ರದ್ದತಿ ಆದೇಶ ಬದಿಗೆ ಸರಿಸಿ, ಕಾನೂನಾತ್ಮಕ ವಾರಸುದಾರರನ್ನು ದಾಖಲೆಯಲ್ಲಿ ತರುವಂತೆ ಮಧ್ಯಂತರ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದಕ್ಕೆ ಆಕ್ಷೇಪಿಸಿದ್ದರೂ ಮಧ್ಯಂತರ ಅರ್ಜಿಗಳನ್ನು ಪುರಸ್ಕರಿಸಲಾಗಿದೆ ಎಂದಿದ್ದರು.

ಇದಕ್ಕೆ ಪತಿ ಪರ ವಕೀಲ ಸಯ್ಯದ್‌ ಖಲೀಲ್‌ ಪಾಷಾ “ದಾವೆಯ ಭಾಗವಾಗಿರುವ ಪತಿಯ ಕಾನೂನಾತ್ಮಕ ವಾರಸುದಾರರು ಅರ್ಜಿದಾರೆಯು (ಪತ್ನಿ) ಪತಿಗೆ ಅಸಾಧ್ಯವಾದ ಕಿರುಕುಳ ನೀಡಿದ್ದಾಳೆ ಎಂದು ಆತ ಹೇಳಿಕೊಂಡಿದ್ದನ್ನು ಕೌಟುಂಬಿಕ ನ್ಯಾಯಾಲಯ ಒಪ್ಪಿಕೊಂಡಿದೆ. ಹೀಗಾಗಿ, ಕೌಟುಂಬಿಕ ನ್ಯಾಯಾಲಯದ ಆದೇಶವು ಸೂಕ್ತ ಮತ್ತು ಸಿಂಧುವಾಗಿದೆ. ಪತ್ನಿಗೆ ವಿಚ್ಛೇದನ ನೀಡಿರುವುದರಿಂದ ಅವರು ಕೌಟುಂಬಿಕ ಪಿಂಚಣಿಗೆ ಅರ್ಹವಾಗಿಲ್ಲ” ಎಂದು ವಾದಿಸಲಾಗಿತ್ತು.

ಪ್ರಕರಣದ ಹಿನ್ನೆಲೆ: ಹಿಂದೂ ವಿವಾಹ ಕಾಯಿದೆ ಸೆಕ್ಷನ್‌ 13 (1) (i-a) (i-b) ಅಡಿ ವಿವಾಹ ಅನೂರ್ಜಿತ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ಪುರಸ್ಕರಿಸಿತ್ತು. ಪತಿಯ ವಿರುದ್ಧ ಪತ್ನಿ ಹಲವು ಪ್ರಕರಣ ದಾಖಲಿಸಿದ್ದು, ಮಧ್ಯಸ್ಥಿಕೆಯ ಹೊರತಾಗಿಯೂ ಆಕೆ ಪತಿ ಜೊತೆ ಸೇರಲು ಬಯಸದಿರುವುದರಿಂದ ಪತ್ನಿ ತನ್ನ ಮೇಲೆ ಕ್ರೌರ್ಯ ಎಸಗಿದ್ದಾಳೆ ಎಂದು ಮೇಲ್ಮನವಿದಾರ ಪತಿ ಎತ್ತಿರುವ ವಿಚಾರ ಸಾಬೀತಾಗಿದೆ ಎಂದು ಕೌಟುಂಬಿಕ ನ್ಯಾಯಾಲಯ ಹೇಳಿತ್ತು.

ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡುವುದು ಮತ್ತು ಅವರು ಕ್ರಿಮಿನಲ್‌ ಪ್ರಕರಣ ದಾಖಲಿಸಿರುವುದು ಪಕ್ಷಕಾರರು ತಿಕ್ಕಾಟದಲ್ಲಿರುವುದನ್ನು ತೋರಲಿದ್ದು, ಅವರು ಪತಿ-ಪತ್ನಿಯರಾಗಿ ಬದುಕಲು ಸಾಧ್ಯವಿಲ್ಲ ಎಂಬುದನ್ನು ತೋರುತ್ತದೆ. ಮದುವೆ ಸರಿಪಡಿಸಲಾಗದ ರೀತಿಯಲ್ಲಿ ಮುರಿದು ಬಿದ್ದಿದೆ. ಹೀಗಾಗಿ, ಹಿಂದೂ ವಿವಾಹ ಕಾಯಿದೆ ಸೆಕ್ಷನ್‌ 13 (1) (i-a) (i-b) ಅಡಿ ವಿಚ್ಛೇದನ ಡಿಕ್ರಿ ನೀಡಲಾಗಿದೆ ಎಂದು ಕೌಟುಂಬಿಕ ನ್ಯಾಯಾಲಯ ಹೇಳಿತ್ತು. ಇದನ್ನು ಪ್ರಶ್ನಿಸಲಾಗಿತ್ತು.

ಹಿಂದಿನ ಲೇಖನಬಿಜೆಡಿ- ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ- ಓರ್ವ ಸಾವು, 7 ಮಂದಿಗೆ ಗಾಯ
ಮುಂದಿನ ಲೇಖನಕುಷ್ಟಗಿ: ಪಟ್ಟಣದ ಹೊರವಲಯದಲ್ಲಿ ನಿಲ್ಲಿಸಿದ್ದ ಟಿಪ್ಪರ್ ಕಳವು