ಬೆಂಗಳೂರು: ನಗರತ್ ಪೇಟೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲಿಸಾ ಹಾಡು ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿದ್ದ ಮತ್ತಿಬ್ಬರು ಆರೋಪಿಗಳನ್ನು ನಿನ್ನೆ (ಮಾ.14)ರ ರಾತ್ರಿ ಹಲಸೂರುಗೇಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಐವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಐವರನ್ನೂ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಏನಿದು ಪ್ರಕರಣ ?
ನಗರತ್ಪೇಟೆಯಲ್ಲಿರುವ ಮೊಬೈಲ್ ಶಾಪ್ ನಲ್ಲಿ ಯುವಕ ಹುನುಮಾನ್ ಚಾಲಿಸಾ ಅನ್ನು ಜೋರು ಸೌಂಡ್ ಇಟ್ಟು ಹಚ್ಚಿದ್ದರು. ಈ ವೇಳೆ ಅಂಗಡಿಗೆ ಬಂದ ಆರು ಜನ ಯುವಕರು ಮಸೀದಿಯಲ್ಲಿ ಪ್ರಾರ್ಥನೆ ಮಾಡುವಾಗ ಜೋರು ಸೌಂಡ್ ಇಟ್ಟು ಹಾಡು ಹಾಕಬೇಡ ಎಂದಿದ್ದರು. ಇದೇ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ನಂತರ ಆರು ಜನ ಯುವಕರು ಅಂಗಡಿಯಲ್ಲಿದ್ದ ಯುವಕ ಮುಖೇಶ್ ಅವರ ಕೊರಳ ಪಟ್ಟಿ ಹಿಡಿದು, ಅಂಗಡಿಯಿಂದ ಹೊರಗೆ ಎಳೆದೊಯ್ದು ಹಲ್ಲೆ ಮಾಡಿದ್ದರು.
ಗ್ಯಾಂಗ್ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇನ್ನು ಗಾಯಗೊಂಡ ಮುಖೇಶ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯುವಕನ ದೂರಿನನ್ವಯ, ಹಲ್ಲೆ ಮಾಡಿದ್ದ ಸುಲೇಮಾನ್, ತರುಣ್, ಶನವಾಜ್, ರೋಹಿತ್, ಡ್ಯಾನಿಶ್ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 506, 504, 149, 307, 323 ಹಾಗೂ 324ರ ಅಡಿಯಲ್ಲಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.