ಮನೆ ರಾಜಕೀಯ ಮೈಸೂರು ಪಾಲಿಕೆ ಮೇಯರ್ ಪಟ್ಟಕ್ಕೆ ಲೆಕ್ಕಾಚಾರ ಆರಂಭ

ಮೈಸೂರು ಪಾಲಿಕೆ ಮೇಯರ್ ಪಟ್ಟಕ್ಕೆ ಲೆಕ್ಕಾಚಾರ ಆರಂಭ

0

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಹಾಲಿ ಮೇಯರ್ ಸುನಂದ ಪಾಲನೇತ್ರ ಅಧಿಕಾರಾವಧಿ ಫೆಬ್ರವರಿ 23ರಂದು ಮುಕ್ತಾಯಗೊಳ್ಳಲಿದ್ದು, ಮುಂದಿನ ಮೇಯರ್ ಯಾರಾಗಲಿದ್ದಾರೆ ಎಂಬ ಕುತೂಹಲದ ಲೆಕ್ಕಾಚಾರ ಆರಂಭವಾಗಿದೆ.

 ಹೊಸ ಮೇಯರ್ ಆಯ್ಕೆಗೆ ಸರಕಾರ ನಿಗದಿಪಡಿಸುವ ಮೀಸಲಿನ ಮೇಲೆ ಮೂರು ಪಕ್ಷಗಳು ಕಣ್ಣಿಟ್ಟಿವೆ.ಇನ್ನೂ 8 ದಿನದಲ್ಲಿ ಮೇಯರ್ ಅವಧಿ ಮುಗಿಯುವುದರಿಂದ ಮುಂದಿನ ಮೇಯರ್ ಯಾರಾಗಲಿದ್ದಾರೆ? ಎಂಬ ಕುತೂಹಲ ಮೂಡಿದೆ.

ಮೂರನೇ ಅವಧಿಯ ಮೇಯರ್ ಚುನಾವಣೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಕಾರಣಕ್ಕೆ ರಾಷ್ಟ್ರ ಮಟ್ಟದ ಗಮನ ಸೆಳೆದಿತ್ತು.

ಈಗ ನಾಲ್ಕನೇ ಅವಧಿಯ ಮೇಯರ್ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ. ವರ್ಷದಲ್ಲಿಯೇ ಮೂವರು ಮೇಯರ್ ಕಂಡ ಮೈಸೂರು ಮಹಾನಗರ ಪಾಲಿಕೆಯು, ಸದ್ಯ ಹೊಸ ಮೇಯರ್ ಆಯ್ಕೆಯ ನಿರೀಕ್ಷೆಯಲ್ಲಿದೆ.

ಪಕ್ಷಗಳ ಬಲಾಬಲ:
ಮೈಸೂರು ಮಹಾನಗರ ಪಾಲಿಕೆಯ ಸದಸ್ಯ ಬಲ 65. ಪಾಲಿಕೆಯಲ್ಲಿ ಬಿಜೆಪಿ 22, ಕಾಂಗ್ರೆಸ್ 20, ಜೆಡಿಎಸ್ 17, ಬಿಎಸ್ಪಿ 1 ಹಾಗೂ ಐವರು ಪಕ್ಷೇತರರು ಇದ್ದಾರೆ. ಪಾಲಿಕೆಗೆ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸಹ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಸದಸ್ಯ ಬಲ ಒಟ್ಟು 72 ಇದೆ. ಈ ಪೈಕಿ ಬಿಜೆಪಿ 25, ಜೆಡಿಎಸ್ 20, ಕಾಂಗ್ರೆಸ್ 21, ಬಿಎಸ್ಪಿ 1 ಹಾಗೂ ಐವರು ಪಕ್ಷೇತರ ಸದಸ್ಯರು ಇದ್ದಾರೆ.

ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ನಡುವೆ ಆದ ಒಡಂಬಡಿಕೆ ಪ್ರಕಾರ ಮೊದಲನೇ ಅವಧಿಯಲ್ಲಿ ಕಾಂಗ್ರೆಸ್ ಪುಷ್ಪಲತಾ ಜಗನ್ನಾಥ್, ಎರಡನೇ ಅವಧಿಯಲ್ಲಿ ಜೆಡಿಎಸ್‌ನ ತಸ್ನಿಂ ಆಯ್ಕೆಗೊಂಡಿದ್ದರು. ಮೂರನೇ ಅವಧಿಯ ಮೇಯರ್ ಸ್ಥಾನವನ್ನು ಜೆಡಿಎಸ್ ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕಾಗಿತ್ತು.

ಆದರೆ, ಅಂತಿಮ ಕ್ಷಣದಲ್ಲಿ ಆದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸದಸ್ಯರು ಜೆಡಿಎಸ್‌ಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಮೇಯರ್ ಸ್ಥಾನ ಅಲಂಕರಿಸಿದರು. ಈ ನಡುವೆ ರುಕ್ಮಿಣಿ ಮಾದೇಗೌಡ ಚುನಾವಣೆ ಸಂದರ್ಭ ಅಫಿಡವಿಟ್‌ನಲ್ಲಿ ಆಸ್ತಿ ವಿವರವನ್ನು ಮರೆಮಾಚಿದ ಆರೋಪದ ಹಿನ್ನೆಲೆಯಲ್ಲಿ ಸದಸ್ಯತ್ವ ಕಳೆದುಕೊಂಡರು.

ನಂತರ ಜೂನ್‌ 25 ರಂದು ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಿತು. ಈ ಸಂದರ್ಭ ಕಾಂಗ್ರೆಸ್-ಜೆಡಿಎಸ್‌ನ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿತು.

ಅತಿ ಹೆಚ್ಚು ಸದಸ್ಯರನ್ನು ಹೊಂದಿದ್ದ ಬಿಜೆಪಿ ಮೇಯರ್ ಪಟ್ಟವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಈ ಎಲ್ಲ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಈ ಬಾರಿಯ ಮೇಯರ್ ಚುನಾವಣೆ ಎಲ್ಲರ ಕುತೂಹಲ ಕೆರಳಿಸಿದೆ.

ಮೈಸೂರು ಪಾಲಿಕೆ ಇತಿಹಾದಲ್ಲೇ ಮೊದಲ ಬಾರಿಗೆ ಬಿಜೆಪಿಗೆ ಮೇಯರ್ ಪಟ್ಟ ಸಿಕ್ಕಿತ್ತು. 1983ರಲ್ಲಿ ಮಹಾನಗರ ಪಾಲಿಕೆಯಾಗಿ ರಚನೆಯಾದರೂ ಬಿಜೆಪಿಗೆ ಅಧಿಕಾರ ಸಿಕ್ಕಿರಲಿಲ್ಲ. ಸುನಂದಾ ಪಾಲನೇತ್ರ ಮೇಯರ್ ಆಗುವ ಮೂಲಕ ಬಿಜೆಪಿಗೆ ಅಧಿಕಾರ ಸಿಕ್ಕಿತ್ತು. ಸುನಂದಾ ಪಾಲನೇತ್ರ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ದೂರದ ಸಂಬಂಧಿ.

ಹಿಂದಿನ ಲೇಖನಹಿಜಾಬ್ ವಿವಾದ: ಮುಸ್ಲಿಂ ಶಾಸಕರಿಂದ ಸಿಎಂ ಭೇಟಿ
ಮುಂದಿನ ಲೇಖನರೈತನಿಗೆ ಪರಿಹಾರ ನೀಡಲು ವಿಳಂಬ: ಕಲಬುರಗಿ ಜಿಲ್ಲಾಧಿಕಾರಿ ಕಾರು ಜಪ್ತಿಗೆ ನ್ಯಾಯಾಲಯ ಆದೇಶ