ಬೆಂಗಳೂರು: ಭೂಗತ ಲೋಕದ ಕುಖ್ಯಾತ ಆರೋಪಿ ವಿಕ್ಕಿ ಶೆಟ್ಟಿ ಹೆಸರಿನಲ್ಲಿ ನಗರದ ರಿಯಲ್ ಎಸ್ಟೇಟ್ ಉದ್ಯಮಿಗೆ ಕರೆ ಮಾಡಿ ಬೆದರಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು ಉದ್ಯಮಿ ಜಿ.ಕೆ. ಶಂಕರ್ ಅವರಿಗೆ ವಿಕ್ಕಿ ಶೆಟ್ಟಿ ಹೆಸರಿನಲ್ಲಿ ಕರೆಗಳು ಬಂದಿದ್ದು, ಹಣಕ್ಕಾಗಿ ಬೆದರಿಸಲಾಗಿದೆ ಎಂದು ಆರೋಪಿಸಿ ಸಿಸಿಬಿ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಮೂಲತಃ ಮಂಗಳೂರಿನವನಾಗಿರುವ ವಿಕ್ಕಿ ಶೆಟ್ಟಿ 2020ರಲ್ಲಿ ರಾಜ್ಯ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಮತ್ತೊಬ್ಬ ಭೂಗತ ಪಾತಕಿ ರವಿ ಪೂಜಾರಿಯ ಮಾಜಿ ಸಹಚರ. ಸದ್ಯ ವಿಕ್ಕಿ ಶೆಟ್ಟಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ ದೂರಿನ ಪ್ರಕಾರ, ಕೆಲವು ದಿನಗಳ ಹಿಂದೆ ಶಂಕರ್ ಅವರಿಗೆ ಮೊದಲ ಬಾರಿ ಕರೆ ಮಾಡಿರುವ ವ್ಯಕ್ತಿ, ತಾನು ವಿಕ್ಕಿ ಶೆಟ್ಟಿ ಎಂದು ಹೇಳಿಕೊಂಡಿದ್ದ. ಅಲ್ಲದೆ ತನಗೆ ಕೋಟ್ಯಾಂತರ ರೂಪಾಯಿ ಹಣ ನೀಡಬೇಕು, ಇಲ್ಲವಾದರೆ ನಿಮ್ಮ ಮಗನ ಮದುವೆ ಸಮಾರಂಭದ ಸಂದರ್ಭದಲ್ಲಿಯೇ ನಿಮ್ಮನ್ನ ಹತ್ಯೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ. ಆರಂಭದಲ್ಲಿ ಇವು ಯಾರೋ ಕಿಡಿಗೇಡಿಗಳು ಮಾಡಿರುವ ಕರೆಗಳೆಂದು ಭಾವಿಸಿ ನಿರ್ಲಕ್ಷಿಸಲಾಗಿತ್ತು.
ಆದರೆ, ಪದೇ ಪದೇ ಬೆದರಿಕೆ ಕರೆಗಳು ಬರಲಾರಂಭಿಸಿದಾಗ ಶಂಕರ್ ಅವರು ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶಂಕರ್ ಅವರ ಮೊಬೈಲ್ ಫೋನ್‌ಗೆ ಇಂಟರ್ನೆಟ್ ಆಧಾರಿತ ಕರೆಗಳ ಮೂಲಕ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ಸದ್ಯ ಆ ಕರೆಗಳ ಮೂಲವನ್ನ ಪತ್ತೆಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
















