ಆಗ್ರಾ: ಉತ್ತರ ಪ್ರದೇಶದ ಹಾತ್ರಸ್ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಪತ್ನಿ ಬೆಳಿಗ್ಗೆ ಬೇಗ ಎಬ್ಬಿಸಿದ್ದ ವಿಚಾರಕ್ಕೆ ಮನನೊಂದು 35 ವರ್ಷದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿಯೊಂದಿಗೆ ನಡೆದ ಜಗಳದ ಬಳಿಕ ಅಕ್ರಮವಾಗಿ ಇಟ್ಟುಕೊಂಡಿದ್ದ ನಾಡಪಿಸ್ತೂಲಿನಿಂದ ತನಗೆ ತಾನೇ ಗುಂಡು ಹಾರಿಸಿಕೊಂಡು ಜೀವ ತೆತ್ತಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಕಂದರರಾವ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರ್ ಜಟ್ಟಾರಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಮೃತ ವ್ಯಕ್ತಿಯನ್ನು ಲಾಲು ಸಿಂಗ್ ಎಂದು ಗುರುತಿಸಲಾಗಿದ್ದು, ಅವರಿಗೆ ಪತ್ನಿ ಆಶಾ ದೇವಿ, ಆರು ವರ್ಷದ ಪುತ್ರ ಆರವ್ ಹಾಗೂ ಒಂದು ವರ್ಷದ ಪುತ್ರಿ ಆರೋಹಿ ಇದ್ದಾರೆ. ಸಣ್ಣ ಕಾರಣದಿಂದ ಆರಂಭವಾದ ಕುಟುಂಬದ ಕಲಹ ದುರಂತದಲ್ಲಿ ಅಂತ್ಯಗೊಂಡಿದೆ.
ಕುಟುಂಬದವರ ಹೇಳಿಕೆ ಪ್ರಕಾರ, ಲಾಲು ಸಿಂಗ್ ಪ್ರತಿದಿನ ಬೆಳಿಗ್ಗೆ 8 ಗಂಟೆ ಸುಮಾರಿಗೆ ಎದ್ದೇಳುವ ಅಭ್ಯಾಸ ಹೊಂದಿದ್ದರು. ಆದರೆ ಬುಧವಾರ ಬೆಳಗಿನ ಜಾವ ಸುಮಾರು 5 ಗಂಟೆಗೆ ಪತ್ನಿ ಆಶಾ ದೇವಿ ಅವರನ್ನು ಎಬ್ಬಿಸಿದ್ದರು. ಮಗನನ್ನು ಶಾಲೆಗೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ವೇಳೆ ಅಡುಗೆಮನೆಯ ಬಾಗಿಲು ಲಾಕ್ ಆಗಿದ್ದ ಕಾರಣ ಅದನ್ನು ತೆರೆಯಲು ಸಹಾಯ ಕೇಳಿ ಪತಿಯನ್ನು ಎಬ್ಬಿಸಿದ್ದಳು.
ಈ ವಿಚಾರವಾಗಿ ಪತಿ-ಪತ್ನಿ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಕೋಪಗೊಂಡ ಲಾಲು ಸಿಂಗ್ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ನಂತರ ಆಶಾ ದೇವಿ ಮಗನನ್ನು ಶಾಲೆಗೆ ಕಳುಹಿಸಿ ಮನೆಗೆ ಬಂದು ಪತಿಗೆ ಚಹಾ ನೀಡಿದ್ದಾಳೆ.
ಬೆಳಿಗ್ಗೆ ಸುಮಾರು 7 ಗಂಟೆ ವೇಳೆಗೆ ಲಾಲು ಸಿಂಗ್ ತನ್ನ ಬಾವನಿಗೆ ಕರೆ ಮಾಡಿ, “ಇದು ನಮ್ಮ ಕೊನೆಯ ಮಾತುಕತೆ, ನಿನ್ನ ತಂಗಿಯನ್ನು ಚೆನ್ನಾಗಿ ನೋಡಿಕೊ” ಎಂದು ಹೇಳಿದ್ದಾನೆ ಎಂದು ಕುಟುಂಬದವರು ತಿಳಿಸಿದ್ದಾರೆ. ಬಳಿಕ ಆತ ತನ್ನ ಕೋಣೆಯೊಳಗೆ ಹೋಗಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾನೆ.
ಸ್ವಲ್ಪ ಸಮಯದ ಬಳಿಕ ಕೋಣೆಯೊಳಗಿಂದ ಗುಂಡಿನ ಸದ್ದು ಕೇಳಿಬಂದಿದ್ದು, ಗಾಬರಿಗೊಂಡ ಪತ್ನಿ ಕೂಗಿಕೊಂಡಿದ್ದಾಳೆ. ತಕ್ಷಣ ಸ್ಥಳೀಯರು ಮನೆಗೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ, ಲಾಲು ಸಿಂಗ್ ರಕ್ತದ ಮಡುವಿನಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನ ಪಕ್ಕದಲ್ಲೇ ಆತ ಬಳಸಿದ ನಾಡಪಿಸ್ತೂಲ್ ಕೂಡ ಪತ್ತೆಯಾಗಿದೆ.
ಈ ಕುರಿತು ಮಾಹಿತಿ ನೀಡಿದ ಸಿಕಂದರರಾವ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವ್ ಕುಮಾರ್, “ಘಟನಾ ಸ್ಥಳದಿಂದ ಅಕ್ರಮ ನಾಡಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕುಟುಂಬದವರ ಹೇಳಿಕೆ ಆಧರಿಸಿ ಮುಂದಿನ ತನಿಖೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.ಕುಟುಂಬದ ಸಣ್ಣ ಕಲಹವೇ ದೊಡ್ಡ ದುರಂತಕ್ಕೆ ಕಾರಣವಾದ ಈ ಘಟನೆ ಗ್ರಾಮಸ್ಥರಲ್ಲಿ ಆತಂಕ ಮತ್ತು ಆಘಾತ ಮೂಡಿಸಿದೆ.


















