ಮನೆ ಕಾನೂನು ಪೆಗಾಸಸ್​ ಸ್ಪೈವೇರ್​:  ನ್ಯೂಯಾರ್ಕ್ ಟೈಮ್ಸ್ ಗೆ ಲೀಗಲ್ ನೋಟಿಸ್ ಕಳುಹಿಸಿದ ತಮಿಳುನಾಡು ವಕೀಲ

ಪೆಗಾಸಸ್​ ಸ್ಪೈವೇರ್​:  ನ್ಯೂಯಾರ್ಕ್ ಟೈಮ್ಸ್ ಗೆ ಲೀಗಲ್ ನೋಟಿಸ್ ಕಳುಹಿಸಿದ ತಮಿಳುನಾಡು ವಕೀಲ

0

ಚೆನ್ನೈ: ಪೆಗಾಸಸ್​ ಸ್ಪೈವೇರ್​ ಬಗ್ಗೆ ತನಿಖಾ ವರದಿ ಮಾಡಿದ್ದ ನ್ಯೂರ್ಯಾರ್ಕ್​​ ಟೈಮ್ಸ್​​ಗೆ, ಚೆನ್ನೈ ಮೂಲದ ವಕೀಲರಾದ ಎಂ. ಶ್ರೀನಿವಾಸನ್ ಅವರು ಲೀಗಲ್​​ ನೋಟಿಸ್  ಜಾರಿ ಮಾಡಿದ್ದು, ನೋಟೀಸ್ ಗೆ ತಕ್ಷಣ ಪ್ರತಿಕ್ರಿಯೆ ನೀಡುವಂತೆ ತಿಳಿಸಿದ್ದಾರೆ.

ಭಾರತ 2017ರಲ್ಲಿ ಇಸ್ರೇಲ್​ ಜತೆ ಮಾಡಿಕೊಂಡಿದ್ದ ರಕ್ಷಣಾ ಒಪ್ಪಂದದ ಭಾಗವಾಗಿ ಸ್ಪೈವೇರ್ ಟೂಲ್ ಪೆಗಾಸಸ್ ಅನ್ನು ಖರೀದಿಸಿದೆ ಎಂದು ಪತ್ರಿಕೆಯ ತನಿಖಾ ವರದಿ ಹೇಳಿತ್ತು. ಈ ಸುದ್ದಿ ಪ್ರಕಟಗೊಂಡ ಬಳಿಕ  ಮದ್ರಾಸ್ ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡುತ್ತಿರುವ ವಕೀಲರು ಜನವರಿ 31 ರಂದು ಇ- ಮೇಲ್ ಮೂಲಕ ನ್ಯೂಯಾರ್ಕ್​ ಟೈಮ್ಸ್​ ಪತ್ರಿಕೆಗೆ ಲೀಗಲ್​ ನೋಟಿಸ್ ರವಾನಿಸಿದ್ದಾರೆ.

ಪತ್ರಿಕೆ ಸುಳ್ಳು ವರದಿ ಮಾಡಿದ್ದು, ಈ ಬಗ್ಗೆ ಒಂದು ವಾರದೊಳಗೆ ಕ್ಷಮೆಯಾಚಿಸಬೇಕು ಹಾಗೂ ತಕ್ಷಣವೇ ನೋಟಿಸ್‌ಗೆ ಉತ್ತರಿಸಬೇಕು  ಅಥವಾ 100 ಕೋಟಿ ರೂಪಾಯಿ ದಂಡ ತೆರಬೇಕು ಎಂದು ಲೀಗಲ್​ ನೋಟಿಸ್​ನಲ್ಲಿ ಶ್ರೀನಿವಾಸನ್​ ಎಚ್ಚರಿಕೆ ನೀಡಿದ್ದಾರೆ.

ನೋಟಿಸ್​​ನಲ್ಲಿ ಇರುವುದೇನು?: ನಿಮ್ಮ ಪತ್ರಿಕೆಯಲ್ಲಿ ಬಂದಿರುವ ಲೇಖನದಿಂದ ದೇಶದ ಪ್ರತಿಷ್ಠೆಗೆ ಧಕ್ಕೆ ತಂದಿದೆ. ಲೇಖನಕ್ಕೆ ಅಗತ್ಯವಾದ ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್ ಈ ಬಗ್ಗೆ ಯಾವುದೇ ದೃಢೀಕರಣ ಮಾಡಿಲ್ಲ. ಲೇಖನ ಬರೆಯುವಾಗ ಹಾಗೂ ಪ್ರಕಟಿಸುವ ಮುನ್ನ ಇಸ್ರೇಲ್​​ನಿಂದ ದೃಢೀಕರಣ ಪಡೆದುಕೊಂಡಿಲ್ಲ ಅಥವಾ ದೃಢೀಕರಣವನ್ನು ಹೊಂದಿಲ್ಲ ಎಂದು  ನೋಟಿಸ್ ನಲ್ಲಿ ತಿಳಿಸಿರುವ ವಕೀಲರು, ತನಿಖಾ ಲೇಖನವು ‘ಚೇಷ್ಟೆ’ ಮತ್ತು ‘ದುರುದ್ದೇಶಪೂರಿತ’ವಾಗಿದೆ ಎಂದು ಆರೋಪಿಸಿದ್ದಾರೆ.

ರಾಜತಾಂತ್ರಿಕ ಹತೋಟಿಗಾಗಿ ಪೆಗಾಸಸ್ ಸಾಫ್ಟ್‌ವೇರ್ ಅನ್ನು ಬಳಸಿಕೊಂಡಿರುವ ಲೇಖನ, ಇಸ್ರೇಲ್ ಬಗ್ಗೆ ಉಲ್ಲೇಖಿಸಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಇಸ್ರೇಲ್ ಪರ ಮತ ಹಾಕುವಂತೆ ಮಾಡಲು ಸಾಫ್ಟ್‌ವೇರ್ ಖರೀದಿಸಿದೆ ಎಂಬಂತೆ ತಪ್ಪಾಗಿ ಬಿಂಬಿಸಲಾಗಿದೆ ಎಂದು ಶ್ರೀನಿವಾಸನ್ ನೋಟಿಸ್​ನಲ್ಲಿ ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ಸೈಯದ್ ಅಕ್ಬರುದ್ದೀನ್ ಅವರು ಈಗಾಗಲೇ ಈ ಬಗೆಗಿನ ಎಲ್ಲ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, ಲೇಖನವು ಭಾರತದ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶವನ್ನು ಹೊಂದಿದೆ ಎಂಬುದು ಸಾಬೀತಾಗಿದೆ ಎಂದು ಶ್ರೀನಿವಾಸನ್ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಒಂದು ವಾರದೊಳಗೆ ನೋಟಿಸ್ ಗೆ ಪ್ರತಿಕ್ರಿಯಿಸದಿದ್ದರೆ  ಒಂದು ರಾಷ್ಟ್ರವಾಗಿ ಭಾರತದ ವಿರುದ್ಧ ಈ ದುರುದ್ದೇಶಪೂರಿತ ಮತ್ತು ದುರುದ್ದೇಶಪೂರಿತ ಲೇಖನದ ವಿರುದ್ಧ ನಾವು ಕಾನೂನುಬದ್ಧವಾಗಿ ಹೋರಾಟ ಮಾಡುತ್ತೇನೆ ಎಂದು ನೋಟಿಸ್ ನೀಡಿರುವ ಶ್ರೀನಿವಾಸನ್ ಹೇಳಿದ್ದಾರೆ.

ಹಿಂದಿನ ಲೇಖನಇಂದಿನ ನಿಮ್ಮ ದಿನ ಭವಿಷ್ಯ
ಮುಂದಿನ ಲೇಖನಜಮ್ಮು ಮತ್ತು ಕಾಶ್ಮೀರದಲ್ಲಿ ಚೀನಾ- ಪಾಕಿಸ್ತಾನವನ್ನು ಒಟ್ಟಿಗೆ ತಂದ ಮೋದಿ ಸರ್ಕಾರ: ರಾಹುಲ್ ಗಾಂಧಿ ಆರೋಪ