ಬೆಂಗಳೂರು: ವಿದೇಶ ಪ್ರಯಾಣಿಕರಿಗೆ ಸಂತಸದ ಸುದ್ದಿ ಸಿಕ್ಕಿದ್ದು, ಜಾಗತಿಕ ಮಟ್ಟದಲ್ಲಿ ವೀಸಾ ಮತ್ತು ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಒದಗಿಸುವ ಪ್ರಮುಖ ಸಂಸ್ಥೆಯಾದ ಬಿಎಲ್ಎಸ್ ಇಂಟರ್ ನ್ಯಾಷನಲ್ ಇದೀಗ ಮುಂಬೈನಲ್ಲಿ ಬೆಲಾರಸ್ ವೀಸಾ ಸೇವೆಗಳನ್ನು ಆರಂಭಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ ಎನ್ನಲಾಗುತ್ತಿದೆ.
ಮುಂಬೈನಲ್ಲಿರುವ ಬೆಲಾರಸ್ ಗಣರಾಜ್ಯದ ಕಾನ್ಸುಲೇಟ್ ಜನರಲ್ ಈ ಜವಾಬ್ದಾರಿಯನ್ನು ಬಿಎಲ್ಎಸ್ ಇಂಟರ್ನ್ಯಾಷನಲ್ಗೆ ವಹಿಸಿದ್ದು, ಇದರ ಮೂಲಕ ಅರ್ಜಿದಾರರಿಗೆ ಸುಲಭ, ದಕ್ಷ ಮತ್ತು ಪಾರದರ್ಶಕ ವೀಸಾ ಸೇವೆಗಳು ಲಭ್ಯವಾಗಲಿವೆ. ಈ ಕುರಿತು ಬೆಲಾರಸ್ಗೆ ಪ್ರಯಾಣಿಸುವ ಭಾರತೀಯರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ವೀಸಾ ಪ್ರಕ್ರಿಯೆಯನ್ನು ಸರಳಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮುಂಬೈನಲ್ಲಿ ಆರಂಭಗೊಂಡಿರುವ ಹೊಸ ವೀಸಾ ಅರ್ಜಿ ಸಲ್ಲಿಕೆ ಕೇಂದ್ರ (VAC) ಮೂಲಕ ಟ್ರಾನ್ಸಿಟ್, ಪ್ರವಾಸೋದ್ಯಮ, ವ್ಯವಹಾರ, ಅಧ್ಯಯನ, ಖಾಸಗಿ ಭೇಟಿ ಸೇರಿದಂತೆ ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡಾ ಮತ್ತು ವೈಜ್ಞಾನಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಎಲ್ಲಾ ವಿಧದ ವೀಸಾಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ ಎನ್ನಲಾಗುತ್ತಿದೆ.
ಈ ವೀಸಾ ಕೇಂದ್ರವನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಅರ್ಜಿದಾರರಿಗೆ ಯಾವುದೇ ಅಡಚಣೆ ಇಲ್ಲದೆ ಸುಗಮವಾಗಿ ವೀಸಾ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಲು ಅನುಕೂಲವಾಗಲಿದೆ. ವೃತ್ತಿಪರ ಸಿಬ್ಬಂದಿಯಿಂದ ನಿರ್ವಹಿಸಲ್ಪಡುವ ಈ ಕೇಂದ್ರದಲ್ಲಿ ಸುರಕ್ಷಿತ ಹಾಗೂ ವ್ಯವಸ್ಥಿತ ವಾತಾವರಣ ಕಲ್ಪಿಸಲಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೂಲಕ ಸುಲಭವಾಗಿ ತಲುಪುವಂತೆಯೂ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಮಾತನಾಡಿದ ಬಿಎಲ್ಎಸ್ ಇಂಟರ್ನ್ಯಾಷನಲ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶಿಖರ್ ಅಗರ್ವಾಲ್, “ಭಾರತದಿಂದ ವಿದೇಶಗಳಿಗೆ ಪ್ರಯಾಣಿಸುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಪ್ರತಿಯೊಬ್ಬ ಪ್ರಯಾಣಿಕನಿಗೂ ತಡೆರಹಿತ, ಗೌರವಯುತ ಮತ್ತು ದಕ್ಷ ವೀಸಾ ಅನುಭವ ನೀಡುವುದು ನಮ್ಮ ಹೊಣೆಗಾರಿಕೆ. ನಾವು ಕೇವಲ ವೀಸಾ ಪ್ರಕ್ರಿಯೆಗೊಳಿಸುವುದಲ್ಲ, ಪ್ರಪಂಚದ ಹೊಸ ಅವಕಾಶಗಳ ಬಾಗಿಲುಗಳನ್ನು ತೆರೆಯುತ್ತಿದ್ದೇವೆ,” ಎಂದು ಹೇಳಿದ್ದಾರೆ. ಇದ್ದರಿಂದ ವೀಸಾ, ಪಾಸ್ಪೋರ್ಟ್, ಕಾನ್ಸುಲರ್ ಸೇವೆಗಳು, ಇ-ಗವರ್ನೆನ್ಸ್, ಅಟೆಸ್ಟೇಷನ್, ಬಯೋಮೆಟ್ರಿಕ್ ಹಾಗೂ ಇ-ವೀಸಾ ಸೇವೆಗಳ ಕ್ಷೇತ್ರದಲ್ಲಿ ಉನ್ನತ ಮಾನದಂಡಗಳನ್ನು ಹೊಂದಿರುವ ಬಿಎಲ್ಎಸ್ ಸಂಸ್ಥೆ, ಅಧಿಕೃತ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪಾರದರ್ಶಕ ಹಾಗೂ ಅರ್ಜಿದಾರ-ಸ್ನೇಹಿ ಸೇವೆಯನ್ನು ಒದಗಿಸುವತ್ತ ಗಮನ ಹರಿಸಿದೆ ಎಂದು ತಿಳಿದುಬಂದಿದೆ ಎನ್ನಲಾಗುತ್ತದೆ.
















