ಮೈಸೂರು: ಗ್ರಾಮೀಣ ಸೊಗಡಿನ ಶೈಲಿಯಲ್ಲಿ ಎತ್ತಿನಗಾಡಿ ಜಾಥಾ ಮೂಲಕ ನಂಜನಗೂಡು ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಹುಲ್ಲಹಲ್ಲಿ ಹೋಬಳಿ ಮಟ್ಟದಲ್ಲಿ ಮತದಾನದ ಜಾಗೃತಿ ಮೂಡಿಸಲಾಯಿತು.
ಹುಲ್ಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ತಾಲ್ಲೂಕು ಸಹಾಯಕ ಲೆಕ್ಕಾಧಿಕಾರಿ ಶ್ರೀಕಂಠನಾಯಕ ಹಾಗೂ ತಾಲ್ಲೂಕು ಯೋಜನಾಧಿಕಾರಿ ಗುರುಮಹದೇವು ಅವರು ಜಾಥಾಗೆ ಚಾಲನೆ ನೀಡಿದರು. ಎತ್ತಿನ ಗಾಡಿ ಏರಿದ ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂಜೀವಿನಿ ಸಂಘದ ಮಹಿಳೆಯರು ಮೇ 10 ರಂದು ಕಡ್ಡಾಯವಾಗಿ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬ ಆಚರಿಸುವಂತೆ ಅರಿವು ಮೂಡಿಸಿದರು.
20ಕ್ಕೂ ಹೆಚ್ಚು ಎತ್ತಿನಗಾಡಿ ಹಾಗೂ 10ಕ್ಕೂ ಹೆಚ್ಚು ಸ್ವಚ್ಚತಾ ವಾಹಿನಿ ಮೂಲಕ ಹುಲ್ಲಹಳ್ಳಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿ ಮತದಾನದ ಮಹತ್ವ ಸಾರಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸಿಬ್ಬಂದಿ, ತಾಲ್ಲೂಕು ಎನ್.ಆರ್.ಎಲ್.ಎಂ.ಸಿಬ್ಬಂದಿ, ಹುಲ್ಲಹಳ್ಳಿ ಹೋಬಳಿಮಟ್ಟದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಹಲವರು ಉಪಸ್ಥಿತರಿದ್ದರು.