ಬೆಂಗಳೂರು (Bengaluru): ಜೂನ್ ಮೂರನೇ ವಾರದಲ್ಲಿ ಬಿಜೆಪಿಯ ಬಹು ನಿರೀಕ್ಷಿತ ಸಂಪುಟ ಪುನಾರಚನೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸಚಿವ ಸ್ಥಾನಕ್ಕೆ ಸಾಕಷ್ಟು ಆಕಾಂಕ್ಷಿಗಳಿದ್ದರೂ, ಜಾತಿ ಹಾಗೂ ಪ್ರಾದೇಶಿಕತೆಗೆ ಹೆಚ್ಚಿದೆ ಆದ್ಯತೆ ನೀಡಿ ಸಮಸ್ಯೆಗಳ ಪರಿಹರಿಸಲು ಪಕ್ಷವು ನಿರ್ಧರಿಸಿದೆ. ಇದರಂತೆ ಈ ಬಾರಿಯ ಸಚಿವ ಸಂಪುಟಕ್ಕೆ ಹೊಸ ಮುಖಗಳಿಗೆ ಅವಕಾಶಗಳು ಸಿಗಲಿದೆ ಎಂದು ಮೂಲಗಳು ತಿಳಿಸಿವೆ.
2023 ರ ವಿಧಾನಸಭಾ ಚುನಾವಣೆಗೆ ಮುನ್ನ ಇದು ಕೊನೆಯ ಸಂಪುಚ ಪುನರ್ರಚನೆಯಾಗಿರುವುದರಿಂದ ಪ್ರತಿ ಗುಂಪು, ಸಮುದಾಯ ಮತ್ತು ಆಸಕ್ತಿಗೆ ಹೆಚ್ಚಿನ ಆದ್ಯತೆ ನೀಡಲು ಪಕ್ಷ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಇನ್ನು ಈ ಬಾರಿ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಪಕ್ಷದಲ್ಲಿ ಸಾಕಷ್ಟು ಅಸಮಾಧಾನಗಳು ವ್ಯಕ್ತವಾಗಲಿದೆ. ಹಲವು ಪಕ್ಷ ತೊರೆಯುವ ಸಾಧ್ಯತೆಗಳಿವೆ ಎಂದು ಹಿರಿಯ ರಾಜಕೀಯ ವಿಶ್ಲೇಷಕರೊಬ್ಬರು ಹೇಳಿದ್ದಾರೆ. ಹೀಗಾಗಿ ಪಕ್ಷವು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಎಲ್ಲರಿಗೂ ಅವಕಾಶ ಕಲ್ಪಿಸಲು ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಜೂ.16-17 ರಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಈ ವೇಳೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳೂ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.
ಜೂ. 10 ರಂದು ರಾಜ್ಯಸಭೆ ಚುನಾವಣೆ ಹಾಗೂ ಜೂ.13 ರಂದು ರಾಜ್ಯ ವಿಧಾನಪರಿಷತ್ ಚುನಾವಣೆ ನಡೆಯಲಿದೆ. ಈ ಚುನಾವಣೆಗಳ ಬಳಿಕ ಬಿಬಿಎಂಪಿ ಹಾಗೂ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು ನಡೆಯಲಿವೆ. ಹೀಗಾಗಿ ಸರಣಿ ಚುನಾವಣೆಗಳು ಇರುವ ಹಿನ್ನೆಲೆಯಲ್ಲಿ ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆ ಪೂರ್ಣಗೊಂಡ ಬಳಿಕ ಮಧ್ಯದಲ್ಲಿರುವ ಜೂನ್15-17ರಂದೇ ಸಂಪುಟ ವಿಸ್ತರಣೆ ಮಾಡಲು ನಾಯಕರು ನಿರ್ಧರಿಸಿದ್ದಾರೆ. ಈ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಕೂಡ ಸಡಿಲಗೊಂಡಿರಲಿದ್ದು, ಈ ಹಿನ್ನೆಲೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಬಿ.ವೈ.ವಿಜಯೇಂದ್ರ ಅವರನ್ನು ಸಂಪುಟದಿಂದ ಹೊರಗಿಟ್ಟಿರುವುದು ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಮಗನಿಗೆ ಸಂಪುಟದಲ್ಲಿ ಸ್ಥಾನ ಕೊಡಿಸಬೇಕೆಂದು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದರೂ ಅದು ವಿಫಲವಾಗಿದೆ. ಅಲ್ಲದೆ. ಅವರನ್ನು ಎಂಎಲ್ಸಿ ಮಾಡುವ ಪ್ರಯತ್ನ ಕೂಡ ವಿಫಲವಾಗಿದೆ. ಈ ಬೆಳವಣಿಗೆ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಮೂಲಗಳು ತಿಳಿಸಿವೆ.