ಮನೆ ರಾಜಕೀಯ ಚನ್ನಪಟ್ಟಣ ಉಪ ಚುನಾವಣೆ: ನಿಖಿಲ್ ಕುಮಾರಸ್ವಾಮಿ, ಎಚ್.ಡಿ.‌ ಕುಮಾರಸ್ವಾಮಿ ಬಿರುಸಿನ ಪ್ರಚಾರ

ಚನ್ನಪಟ್ಟಣ ಉಪ ಚುನಾವಣೆ: ನಿಖಿಲ್ ಕುಮಾರಸ್ವಾಮಿ, ಎಚ್.ಡಿ.‌ ಕುಮಾರಸ್ವಾಮಿ ಬಿರುಸಿನ ಪ್ರಚಾರ

0

ಚನ್ನಪಟ್ಟಣ (ರಾಮನಗರ): ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಕೇಂದ್ರ ಸಚಿವ ಎಚ್.ಡಿ.‌ ಕುಮಾರಸ್ವಾಮಿ ಸೋಮವಾರ ಬಿರುಸಿನ ಪ್ರಚಾರ ನಡೆಸಿದರು.

Join Our Whatsapp Group

ತಾಲ್ಲೂಕಿನ ಹುಣಸನಹಳ್ಳಿಯ ಬಿಸಲಮ್ಮ ಕರಗದ ಮನೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ಪೂಜೆ ಸಲ್ಲಿಸಿದ ನಿಖಿಲ್, ನಂತರ ಕೋಡಂಬಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪ್ರಚಾರ  ನಡೆಸಿದರು. ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.

ಬಳಿಕ  ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೋಡಂಬಳ್ಳಿ ಹೋಬಳಿಯ 18 ಗ್ರಾಮಗಳಿಗೆ ಭೇಟಿ ನೀಡ್ತಿದ್ದೇನೆ. ಜನ ರಾತ್ರಿವರೆಗೂ ಜೊತೆಯಲ್ಲಿ ಇದ್ದು ಬೆಂಬಲ ಕೊಡ್ತಿದ್ದಾರೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಅಭಿವೃದ್ಧಿ ಕೆಲಸ ನಮ್ಮ ಕೈ ಹಿಡಿಯುತ್ತವೆ ಎಂದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಅದಕ್ಕಾಗಿ ಯೋಗೇಶ್ವರ್ ಗೆಲ್ಲಿಸಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆಸಿದ ಅವರು, ಕಾಂಗ್ರೆಸ್ ನಾಯಕರು ಹೇಳಿಕೆಗಳನ್ನು ಗಮನಿಸಿದ್ದೇನೆ. ರಾಜಕೀಯವಾಗಿ ಮಾತನಾಡೋದು ಸರ್ವೆ ಸಾಮಾನ್ಯ. ಆದರೆ ಮೊಮ್ಮಗನ ಪಟ್ಟಾಭಿಷೇಕಕ್ಕೆ ದೇವೇಗೌಡ್ರು ಆ್ಯಂಬುಲೆನ್ಸ್‌ನಲ್ಲಿ ಬರ್ತಾರೆ ಅನ್ನೊದು ಸರಿಯಲ್ಲ. ಅಂತಹ ದುರ್ದೈವ ನಮಗೆ ಬಂದಿಲ್ಲ. ರಾಜ್ಯದ ಜನರ ಆಶಿರ್ವಾದಿಂದ ಅವರು ಶಕ್ತಿಯುತವಾಗಿದ್ದಾರೆ. ದೀಪಾವಳಿ ಬಳಿಕ ಅವರೇ ಬಂದು ಪ್ರಚಾರ ಮಾಡ್ತಾರೆ‌ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿಕೆಗೆ ತಿರುಗೇಟು ನೀಡಿದರು.

ಚರ್ಚೆ ಮಾಡೋದಾದ್ರೆ ಅಭಿವೃದ್ಧಿ ವಿಚಾರಗಳ ಮೇಲೆ ಮಾಡಲಿ. ದೇವೇಗೌಡರ ಬಗ್ಗೆ ವಿರೋಧಿಗಳು ಹಗುರವಾಗಿ ಮಾತನಾಡುವುದು ಸರಿಯಲ್ಲ. ನಾನು‌ ಮಂಡ್ಯದಲ್ಲಿ ಸ್ಪರ್ಧೆ ಮಾಡಿದಾಗ ಸೋಲಿಸಿದ್ದು ಯಾರು? ಅಲ್ಲೂ ನಾನು ಮಾಡದ ತಪ್ಪಿಗೆ ಅನ್ಯಾಯ ಆಯ್ತು. ರಾಮನಗರದಲ್ಲೂ ಕೂಪನ್ ಹಂಚಿ ಅಮಾಯಕರನ್ನು ದಾರಿ‌ತಪ್ಪಿಸಿದ್ರು. ಅಲ್ಲೂ ಕುತಂತ್ರದಿಂದ ನನ್ನನ್ನ ಸೋಲಿಸಿದ್ರು. ಕೊನೆ ಹಂತದಲ್ಲಿ ಕಾರ್ಯಕರ್ತರನ್ನ ಉಳಿಸಬೇಕು‌. ಎರಡೂ ಪಕ್ಷಗಳ‌ ಗೌರವ ಕಾಪಾಡಲು ನಾನಿಲ್ಲಿ ಸ್ಪರ್ಧೆ ಮಾಡಿದ್ದೇನೆ ಎಂದು ಹೇಳಿದರು.