ಬರ್ಲಿನ್ : ಜರ್ಮನಿಯ ಗುರುದ್ವಾರದಲ್ಲಿ ಬಂದೂಕು, ಕಿರ್ಪಾನ್, ಪೆಪ್ಪರ್ ಸ್ಪ್ರೇ ಹಿಡಿದು ನಡೆದ ಘರ್ಷಣೆಯಲ್ಲಿ 11 ಜನರು ಗಾಯಗೊಂಡಿದ್ದಾರೆ. ಜರ್ಮನಿಯ ಮೋರ್ಸ್ ನಗರದ ಡ್ಯೂಸ್‌ಬರ್ಗ್ ಪ್ರದೇಶದ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ ಭುಗಿಲೆದ್ದ ನಂತರ ಕನಿಷ್ಠ 11 ಜನರು ಗಾಯಗೊಂಡಿದ್ದಾರೆ.
ಧಾರ್ಮಿಕ ಆವರಣದೊಳಗೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿರುವ ದೃಶ್ಯದ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಗಲಾಟೆಯಲ್ಲಿ ಚಾಕುಗಳು ಮತ್ತು ಕಿರ್ಪಾನ್‌ಗಳು ಸೇರಿದಂತೆ ಚೂಪಾದ ವಸ್ತುಗಳು ಝಳಪಿಸಿವೆ.
ಈ ಘರ್ಷಣೆಯಲ್ಲಿ ಸುಮಾರು 40 ಜನರು ಭಾಗಿಯಾಗಿದ್ದರು. ಧಾರ್ಮಿಕ ಆವರಣದಲ್ಲಿ ಬ್ಲೇಡ್ ಜೊತೆಗೆ ಆಯುಧಗಳು, ಪೆಪ್ಪರ್ ಸ್ಪ್ರೇ ಮತ್ತು ಬಂದೂಕನ್ನು ಸಹ ಬಳಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.
ರಕ್ತಸಿಕ್ತ ಘರ್ಷಣೆಗೆ ಕಾರಣ ಏನೆಂಬ ಬಗ್ಗೆ ತನಿಖೆ ನಡೆಯುತ್ತಿದೆ. ಹೊಸ ನಿರ್ದೇಶಕರ ಮಂಡಳಿಯ ಚುನಾವಣೆಯಿಂದ ಘರ್ಷಣೆ ಉಂಟಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿವಾದಗಳು ಗುರುದ್ವಾರ ನಿಧಿಗಳನ್ನು ಸಹ ಒಳಗೊಂಡಿವೆ ಎಂದು ವರದಿಯಾಗಿದೆ.
ಘರ್ಷಣೆ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಪರಾಧ ತನಿಖಾ ಇಲಾಖೆಯು, ಯಾರು ಯಾರ ಮೇಲೆ ದಾಳಿ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಬಂದೂಕು ಇನ್ನೂ ಪತ್ತೆಯಾಗಿಲ್ಲ ಎಂಬ ಮಾಹಿತಿ ವರದಿಯಾಗಿದೆ.















