ಮನೆ ರಾಜ್ಯ ಕಾಶಿ ಯಾತ್ರಾರ್ಥಿಗಳಿಗೆ ಸಹಾಯಧನ ವರ್ಗಾವಣೆ ಮಾಡಿದ ಸಿಎಂ ಬೊಮ್ಮಾಯಿ

ಕಾಶಿ ಯಾತ್ರಾರ್ಥಿಗಳಿಗೆ ಸಹಾಯಧನ ವರ್ಗಾವಣೆ ಮಾಡಿದ ಸಿಎಂ ಬೊಮ್ಮಾಯಿ

0

ಬೆಂಗಳೂರು (Bengaluru): ರಾಜ್ಯದಿಂದ ಕಾಶಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಸಹಾಯಧನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಡಿಬಿಟಿ ಮೂಲಕ ಆನ್ ಲೈನ್ ನಲ್ಲಿ ವರ್ಗಾವಣೆ ಮಾಡಿದರು. 

ಇತ್ತೀಚೆಗೆ ಕಾಶಿಯಾತ್ರೆಗೆ ತೆರಳಿದ್ದ 10 ಜನ ಯಾತ್ರಾರ್ಥಿಗಳಿಗೆ ಸಾಂಕೇತಿಕವಾಗಿ ಸಹಾಯಧನ ವಿತರಿಸಲಾಯಿತು. ನಂತರ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು,  ದಿವ್ಯ ಕಾಶಿ – ಭವ್ಯ ಕಾಶಿಯಾಗಿ ಅನಾವರಣಗೊಂಡಿರುವ ಕಾಶಿಯನ್ನು ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶಿಸಲಿ ಎನ್ನುವ ಉದ್ದೇಶದಿಂದ ಸಹಾಯಧನ ಯೋಜನೆ ಪ್ರಾರಂಭಿಸಲಾಗಿದೆ. ಈ ಬಾರಿಯ ಆಯವ್ಯಯದಲ್ಲಿ ಇದಕ್ಕಾಗಿ ಅಗತ್ಯ ಅನುದಾನವನ್ನೂ ನೀಡಲಾಗಿದೆ. ಯಾತ್ರಾರ್ಥಿಗಳು ಸುಲಭವಾಗಿ ಸಹಾಯಧನ ಪಡೆದುಕೊಳ್ಳುವುದಕ್ಕೆ ಅನುವು ಮಾಡಿಕೊಡುವ ವೆಬ್‌ಪೋರ್ಟಲ್‌ನ್ನು ಸೇವಾಸಿಂಧು ವೆಬ್‌ಪೋರ್ಟ್‌ಲ್‌ನಲ್ಲಿ ಸಿದ್ದಪಡಿಸಲಾಗಿದೆ. ಯಾತ್ರಾರ್ಥಿಗಳು ಕಾಶಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಕರ್ನಾಟಕ ಛತ್ರದಲ್ಲಿ ತಮ್ಮ ಹೆಸರು ನೊಂದಣಿ ಮಾಡಿಸಿಕೊಂಡು ಅಗತ್ಯ ದಾಖಲಾತಿಗಳನ್ನು ವೆಬ್‌ಪೋರ್ಟ್‌ಲ್‌ ಮೂಲಕ ಸಲ್ಲಿಸಬಹುದು ಎಂದು ಹೇಳಿದರು.

ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಜೊಲ್ಲೆ ಮಾತನಾಡಿ,‌ ಏಪ್ರಿಲ್‌ 1, 2022 ರಿಂದ ಜುಲೈ 20, 2022 ರವರೆಗೆ ಕಾಶಿ ಯಾತ್ರೆಯನ್ನು ಕೈಗೊಂಡಿರುವ ಜನರು ಆಫ್‌ಲೈನ್‌ ಅರ್ಜಿಗಳನ್ನು ಮುಜರಾಯಿ ಆಯುಕ್ತರ ಕಚೇರಿಗೆ ಸಲ್ಲಿಸುವ ಮೂಲಕ ಸಹಾಯಧನ ಪಡೆದುಕೊಳ್ಳಬಹುದಾಗಿದೆ. ಇದುವರೆಗೂ 500 ಕ್ಕೂ ಹೆಚ್ಚು ಆಪ್ಲೈನ್‌ ಅರ್ಜಿಗಳು ಸಲ್ಲಿಕೆಯಾಗಿವೆ.

ಇನ್ನು ಮುಂದೆ ಕಾಶಿ ಯಾತ್ರೆಯನ್ನು ಕೈಗೊಂಡು ಸರ್ಕಾರದ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಯಾತ್ರಾರ್ಥಿಗಳು ಸರ್ಕಾರದ ಮಾರ್ಗಸೂಚಿಯ ಅನ್ವಯ ಸಂಬಂಧಿಸಿದ ದಾಖಲಾತಿಗಳನ್ನು ಇಲಾಖೆಯ ವೆಬ್‌ಸೈಟ್‌ https://itms.kar.nic.in/ ಮತ್ತು ಸೇವಾ ಸಿಂಧು ಮೂಲಕ ವೆಬ್‌ ಪೊರ್ಟ್‌ಲ್‌ನಲ್ಲಿ (https://sevasindhu.karnataka.gov.in/) ಅಪ್‌ಲೋಡ್‌ ಮಾಡಬೇಕು. ಈ ರೀತಿಯಾಗಿ ಅಪ್‌ಲೋಡ್‌ ಮಾಡಲಾದ ದಾಖಲೆಗಳನ್ನು ಪರಿಶೀಲಿಸಿ ಅರ್ಜಿದಾರರ ಆಧಾರ್‌ ಲಿಂಕ್‌ ಹೊಂದಿರತಕ್ಕಂತಹ ಬ್ಯಾಂಕ್‌ ಖಾತೆಗೆ ರೂ. 5,000 ಗಳ ಸಹಾಯಧನವನ್ನು ನೇರವಾಗಿ ಡಿ.ಬಿ.ಟಿ ಮೂಲಕ ಜಮಾ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಹಿಂದಿನ ಲೇಖನಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಗೊಟಬಯ ರಾಜಪಕ್ಸ
ಮುಂದಿನ ಲೇಖನಗಾಯಕ ದಲೇರ್‌ ಮೆಹೆಂದಿಗೆ 2 ವರ್ಷ ಜೈಲು ಶಿಕ್ಷೆ