ಬೆಂಗಳೂರು: ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಅವರನ್ನು ಪಕ್ಷ ತೊರೆಯದಂತೆ ಮನವೊಲಿಕೆ ಮಾಡಲು ಸಿದ್ದರಾಮಯ್ಯ ಯತ್ನಿಸುತ್ತಿದ್ದು, ಇಂದು ಸಿದ್ದರಾಮಯ್ಯ ಸೂಚನೆ ಮೇರೆಗೆ ಎಚ್.ಸಿ.ಮಹದೇವಪ್ಪ ಅವರು ಇಬ್ರಾಹಿಂ ಜೊತೆ ಸಂಧಾನ ಮಾತುಕತೆ ನಡೆಸಿದರು.
ವಿಧಾನ ಪರಿಷತ್ ವಿಪಕ್ಷ ನಾಯಕನ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಇಬ್ರಾಹಿಂ ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದು, ಶೀಘ್ರವೇ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರಲು ನಿರ್ಧರಿಸಿದ್ದಾರೆ.
ಸಿ.ಎಂ.ಇಬ್ರಾಹಿಂರನ್ನು ಭೇಟಿ ಮಾಡಿದ ಮಹದೇವಪ್ಪ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯನವರ ಸಂದೇಶವನ್ನು ತಲುಪಿಸಿದ್ದಾರೆ. ಹೈಕಮಾಂಡ್ ಜತೆಯೂ ಈ ಕುರಿತು ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.
ಮಹದೇವಪ್ಪ ಭೇಟಿ ವೇಳೆ ಫೆ.10 ರಂದು ತಮ್ಮ ನಿಲುವು ತಿಳಿಸುತ್ತೇನೆ ಎಂದು ಇಬ್ರಾಹಿಂ ಹೇಳಿದ್ದಾರೆಂದು ವರದಿ ತಿಳಿಸಿದೆ.
ನಾನೇ ಇಬ್ರಾಹಿಂ ಮನೆಗೆ ಹೋಗಿ ಮಾತನಾಡುತ್ತೇನೆ. ಅವರು ಕಾಂಗ್ರೆಸ್ ನಲ್ಲೆ ಇರಬೇಕು ಎಂಬುದು ನಮ್ಮ ಆಶಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇತ್ತೀಚೆಗೆ ಇಬ್ರಾಹಿಂ ಅವರ ಜತೆ ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ದೂರವಾಣಿ ಮೂಲಕ ಸುಮಾರು ಅರ್ಧಗಂಟೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಇಬ್ರಾಹಿಂ ತಮಗೆ ಆಗಿರುವ ಅನ್ಯಾಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಸೂಚನೆಯಂತೆ ಇಬ್ರಾಹಿಂ ಜತೆ ಮಾತನಾಡಿದ್ದೇನೆ. ಅವರಿಗೆ ಪಕ್ಷ ತಮ್ಮನ್ನು ನಡೆಸಿಕೊಂಡಿರುವ ಬಗ್ಗೆ ಬೇಸರವಿದೆ. ಶೀಘ್ರವೇ ಅವರನ್ನು ಭೇಟಿ ಮಾಡಿ ಮತ್ತೆ ಮಾತನಾಡುತ್ತೇನೆ ಎಂದು ಹೇಳಿದ್ದರು. ಅದರಂತೆ ಇಂದು ಭೇಟಿಯಾಗಿದ್ದಾರೆ.