ಬೆಂಗಳೂರು(Bengaluru): ವಿದ್ಯುತ್ ಪ್ರವಹಿಸಿ 22 ವರ್ಷದ ಯುವಕ ಸಾವನ್ನಪ್ಪಿದ್ದ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ(Chief Minister) ಬಸವರಾಜ ಬೊಮ್ಮಾಯಿ(Basavaraja Bommai) ಭರವಸೆ ನೀಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನಿಜಕ್ಕೂ ದುರಾದೃಷ್ಟಕರ ಸಂಗತಿ. ಈಗಾಗಲೇ ಅಧಿಕಾರಿಗಳಿಗೆ ಈ ಸಂಬಂಧ ಮಾತುಕತೆ ನಡೆಸಿದ್ದು, ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಪ್ರಕರಣದಲ್ಲಿ ಅಧಿಕಾರಿಗಳ ತಪ್ಪುಗಳು ಕಂಡು ಬಂದಿದ್ದೇ ಆದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಯುವಕನ ಸಾವಿಗೆ ಬಿಬಿಎಂಪಿ ಹಾಗೂ ಬೆಸ್ಕಾಂ ಬೇಜವಾಬ್ದಾರಿತನವೇ ಕಾರಣ ಎಂದು ಆರೋಪಿಸಲಾಗುತ್ತಿದ್ದು, ಪ್ರಕರಣದ ಸಂಪೂರ್ಣ ತನಿಖೆ ನಡೆಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಅವಘಡ ಆಪ್ಟಿಕಲ್ ವೈರ್ ಅಥವಾ ವಿದ್ಯುತ್ ತಂತಿಯಿಂದ ಸಂಭವಿಸಿರುವುದೇ ಎಂಬ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಲಾಗಿದೆ. ಯುವಕನಿಗೆ ಇಂಧನ ಇಲಾಖೆಯ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.