ನವದೆಹಲಿ: ಜಾಗತಿಕ ಇಂಧನ ಮಾರುಕಟ್ಟೆಯ ಏರಿಳಿತಗಳ ನಡುವೆಯೇ ದೇಶದಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು ಮತ್ತೊಮ್ಮೆ ಹೆಚ್ಚಿಸಲಾಗಿದೆ. 19 ಕೆಜಿ ತೂಕದ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ₹42 ರಷ್ಟು ಏರಿಕೆ ಮಾಡಲಾಗಿದೆ.
ಪರಿಷ್ಕೃತ ದರ ಸೋಮವಾರದಿಂದಲೇ ಜಾರಿಗೆ ಬಂದಿದ್ದು, ಹೋಟೆಲ್, ರೆಸ್ಟೋರೆಂಟ್, ಬೇಕರಿ ಹಾಗೂ ವಿವಿಧ ವಾಣಿಜ್ಯ ಚಟುವಟಿಕೆಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ.ಹೊಸ ದರದ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ತೂಕದ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ₹3,113.50ಕ್ಕೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ₹53.50 ಹೆಚ್ಚಳವಾಗಿದ್ದು, ಸಿಲಿಂಡರ್ ದರ ₹3,255.50ಕ್ಕೆ ತಲುಪಿದೆ. ಇದರ ಜೊತೆಗೆ, 5 ಕೆಜಿ ತೂಕದ ಫ್ರೀ ಟ್ರೇಡ್ ಎಲ್ಪಿಜಿ (FTL) ಸಿಲಿಂಡರ್ ದರವನ್ನೂ ₹11 ಹೆಚ್ಚಿಸಲಾಗಿದ್ದು, ದೆಹಲಿಯಲ್ಲಿ ಇದರ ಹೊಸ ಬೆಲೆ ₹821.50 ಆಗಿದೆ.
ಬೆಂಗಳೂರಿನಲ್ಲಿ ಎಷ್ಟು ಬೆಲೆ?
ಬೆಂಗಳೂರಿನಲ್ಲಿ 19 ಕೆಜಿ ತೂಕದ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ₹46 ಏರಿಕೆ ಮಾಡಲಾಗಿದ್ದು, ಹೊಸ ದರ ₹3,198ಕ್ಕೆ ತಲುಪಿದೆ.
ಕಳೆದ ತಿಂಗಳು ಕೂಡ ವಾಣಿಜ್ಯ ಸಿಲಿಂಡರ್ ದರ ಏರಿಕೆಯಾಗಿದ್ದು, ಅದರ ಬೆಲೆ ₹3,152 ಆಗಿತ್ತು. ಇದೀಗ ಮತ್ತೊಮ್ಮೆ ದರ ಹೆಚ್ಚಳವಾಗಿರುವುದು ವ್ಯಾಪಾರ ವಲಯದ ಆತಂಕಕ್ಕೆ ಕಾರಣವಾಗಿದೆ.
ಗೃಹಬಳಕೆಯ ಸಿಲಿಂಡರ್ ದರ ಯಥಾಸ್ಥಿತಿ
ಸಾಮಾನ್ಯ ಜನರು ಬಳಸುವ 14.2 ಕೆಜಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಗೃಹ ಬಳಕೆದಾರರಿಗೆ ಸದ್ಯದ ಮಟ್ಟಿಗೆ ಯಾವುದೇ ಹೆಚ್ಚುವರಿ ಹೊರೆ ಬಿದ್ದಿಲ್ಲ.
ವಾಣಿಜ್ಯ ಸಿಲಿಂಡರ್ ದರ ಏರಿಕೆಯಿಂದ ಹೋಟೆಲ್, ಉಪಹಾರ ಗೃಹ, ಆಹಾರ ಉತ್ಪಾದನಾ ಘಟಕಗಳು ಹಾಗೂ ಸಣ್ಣ ಉದ್ಯಮಗಳ ಕಾರ್ಯಾಚರಣಾ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ.


















