ಮನೆ ಕಾನೂನು ಗ್ರಾಹಕರಿಗೆ ತಾವು ಏನನ್ನು ಖರೀದಿಸುತ್ತಿದ್ದೇವೆ ಎಂಬ ಅರಿವಿತ್ತು ಎನ್ನುವ ಕಾರಣಕ್ಕೆ ದೂರು ತಿರಸ್ಕರಿಸಲಾಗದು: ಸುಪ್ರೀಂ

ಗ್ರಾಹಕರಿಗೆ ತಾವು ಏನನ್ನು ಖರೀದಿಸುತ್ತಿದ್ದೇವೆ ಎಂಬ ಅರಿವಿತ್ತು ಎನ್ನುವ ಕಾರಣಕ್ಕೆ ದೂರು ತಿರಸ್ಕರಿಸಲಾಗದು: ಸುಪ್ರೀಂ

0

ಗ್ರಾಹಕರಿಗೆ ತಾವು ಏನನ್ನು ಖರೀದಿಸಿದ್ದೇವೆ ಎಂಬುದರ ಅರಿವಿತ್ತು ಎಂಬ ಕಾರಣಕ್ಕೆ ಅವರ ದೂರುಗಳನ್ನು ಗ್ರಾಹಕ ವೇದಿಕೆಗಳು ತಿರಸ್ಕರಿಸಬಾರದು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ .

[ದೇಬಶಿಶ್ ಸಿನ್ಹಾ ಮತ್ತಿತರರ ಹಾಗೂ ಕೋಲ್ಕತ್ತಾದ ಆರ್ಎನ್ಆರ್ ಎಂಟರ್ಪ್ರೈಸಸ್  ಮಾಲೀಕ/ಅಧ್ಯಕ್ಷರು ಇನ್ನಿತರರ ನಡುವಣ ಪ್ರಕರಣ].

ಗ್ರಾಹಕ ಸಂರಕ್ಷಣಾ ಕಾಯಿದೆ ಪ್ರಕಾರ, ಗ್ರಾಹಕರು ಖರೀದಿ ಮಾಡಿದ ಬಳಿಕವೇ ಗ್ರಾಹಕರ ವೇದಿಕೆಗಳ ನ್ಯಾಯವ್ಯಾಪ್ತಿಯನ್ನು ಹೆಚ್ಚಾಗಿ ಅನ್ವಯಿಸಲಾಗುತ್ತದೆ. ಹೀಗಾಗಿ ಗ್ರಾಹಕರಿಗೆ ತಾವು ಖರೀದಿಸಿದ್ದರ ಬಗ್ಗೆ ಅರಿವಿತ್ತು ಎಂಬ ಕಾರಣಕ್ಕೆ ಅವರ ದೂರುಗಳನ್ನು ತಿರಸ್ಕರಿಸಿದರೆ ಕಾಯಿದೆಯ ಧ್ಯೇಯೋದ್ದೇಶಕ್ಕೆ ಸೋಲುಂಟಾಗುತ್ತದೆ. ಖರೀದಿ ಬಳಿಕ ಯಾವುದೇ ದೋಷ ಕಂಡುಬಂದರೆ ಅದು ಗ್ರಾಹಕ ವೇದಿಕೆಗಳಲ್ಲಿ ಪರಿಹಾರ ಪಡೆಯುವುದಕ್ಕಾಗಿ ತೊಂದರೆಗೀಡಾದ ಗ್ರಾಹಕನಿಗೆ ಮಾರ್ಗ ತೆರೆಯುತ್ತದೆ ಎಂದು ನ್ಯಾಯಾಲಯದ ಆದೇಶ ಹೇಳಿದೆ.

ತಾವು ಏನನ್ನು ಖರೀದಿಸುತ್ತಿದ್ದಾರೆ ಎಂಬುದು ಗ್ರಾಹಕರಿಗೆ ತಿಳಿದಿತ್ತು ಎಂಬ ಕಾರಣಕ್ಕೆ ಗ್ರಾಹಕರ ದೂರನ್ನು ತಿರಸ್ಕರಿದ್ದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ (ಎನ್’ಸಿಡಿಆರ್’ಸಿ) ಕ್ರಮದ ಬಗ್ಗೆ ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಫ್ಲ್ಯಾಟ್’ಗಳಿಗೆ ಸಂಬಂಧಿಸಿದಂತೆ ತಾವು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಫ್ಲ್ಯಾಟ್ ಡೆವಲಪರ್ಗಳು ವಿಫಲರಾಗಿದ್ದಾರೆ ಎಂದು ದೂರಿದ್ದ ಮೇಲ್ಮನವಿದಾರರು ಫ್ಲ್ಯಾಟ್ ಡೆವಲಪರ್ಗಳಿಂದ ಪರಿಹಾರ ಕೋರಿದ್ದರು. ವಿಚಾರಣೆ ಬಳಿಕ, ಫ್ಲ್ಯಾಟ್ ಡೆವಲಪರ್’ಗಳ ತಪ್ಪಿದೆ ಎಂದು ಎನ್’ಸಿಡಿಆರ್’ಸಿ ತಿಳಿಸಿತು. ಆದರೆ ಫ್ಲಾಟ್ ಪೂರ್ಣಗೊಳಿಸುವಿಕೆಗೆ ಸಂಬಂಧಿಸಿದ ಪ್ರಮಾಣ ಪತ್ರ ದೊರೆತಿಲ್ಲ ಎಂದು ಗೊತ್ತಿದ್ದೂ ಅರ್ಜಿದಾರರು ಫ್ಲಾಟ್ ಖರೀದಿಸಿದ್ದಾರೆ. ಹೀಗಾಗಿ ಎರಡೂ ಕಡೆಯವರಿಂದ ಕಾನೂನು ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. ಜೊತೆಗೆ ಅರ್ಜಿದಾರರಿಗೆ ಪರಿಹಾರ ನೀಡಲು ನಿರಾಕರಿಸಿತ್ತು. ತಾವು ಏನನ್ನು ಖರೀದಿಸುತ್ತಿದ್ದೇವೆ ಎಂಬುದು ಗ್ರಾಹಕರಿಗೆ ಗೊತ್ತಿತ್ತು ಎಂದು ಅದು ಹೇಳಿತು.

ಆದರೆ ಎನ್ಸಿಡಿಆರ್ಸಿ ಆದೇಶವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. “ವೇದಿಕೆಯ ಆದೇಶ ತರ್ಕವನ್ನು ಧಿಕ್ಕರಿಸಿದೆ. ಕೆಲವು ಅಂಶಗಳ ಕುರಿತಂತೆ ನಿಷ್ಕ್ರಿಯವಾಗಿದ್ದು ಫ್ಲಾಟ್ ಡೆವಲಪರ್’ಗಳನ್ನು ಕಾನೂನಿಗೆ ವಿರುದ್ಧವಾದ ರೀತಿಯಲ್ಲಿ ಬಿಟ್ಟುಬಿಟ್ಟಿದೆ ಎಂದು ನ್ಯಾಯಾಲಯ ಹೇಳಿತು.

ಫ್ಲ್ಯಾಟ್ ಡೆವಲಪರ್’ಗಳು ತಮ್ಮ ನಡೆ ಕುರಿತಂತೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದು ಅನ್ಯಾಯದ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂದು ಎನ್’ಸಿಡಿಆರ್’ಸಿ ಪತ್ತೆ ಹಚ್ಚಿದ ಬಳಿಕ ಮೇಲ್ಮನವಿದಾರರ ಅಹವಾಲನ್ನು ವಸ್ತುನಿಷ್ಠವಾಗಿ ಮತ್ತು ವಿವೇಚನೆ ಬಳಸಿ ಪರಿಗಣಿಸುವುದು ಮತ್ತು ತರ್ಕಬದ್ಧ ನಿರ್ಧಾರಕ್ಕೆ ಬರುವುದು ಅದರ ಹೊಣೆಯಾಗಿದೆ. ಪ್ರತಿವಾದಿಗಳು ಫ್ಲ್ಯಾಟ್ ಮಾರಾಟ ಪ್ರಕ್ರಿಯೆಯಲ್ಲಿ ಎಡವಿದ್ದರೆ ಅದನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸುವುದು ಎನ್’ಸಿಡಿಆರ್’ಸಿ ಕರ್ತವ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತು.

ಅಂತಿಮವಾಗಿ ಡೆವಲಪರ್ಗಳು ನೀಡಿದ್ದ ಭರವಸೆ ಅಂಶವನ್ನು ಪರಿಗಣಿಸುವಂತೆ ಸೂಚಿಸಿ ಪ್ರಕರಣವನ್ನು ಅದು ಎನ್’ಸಿಡಿಆರ್’ಸಿ ಗೆ ಮರಳಿಸಿತು.