ಮನೆ ರಾಜಕೀಯ ಕಾಂಗ್ರೆಸ್​ನವರಿಗೆ ವಿದೇಶಾಂಗ ನೀತಿಯೇ ಗೊತ್ತಿಲ್ಲ: ಪ್ರತಾಪ್ ಸಿಂಹ

ಕಾಂಗ್ರೆಸ್​ನವರಿಗೆ ವಿದೇಶಾಂಗ ನೀತಿಯೇ ಗೊತ್ತಿಲ್ಲ: ಪ್ರತಾಪ್ ಸಿಂಹ

0

ಮೈಸೂರು: ಚೀನಾ ದೇಶವು ಟಿಬೆಟ್ ಅನ್ನ ಕಬಳಿಸಿದಾಗ ಸುಮ್ಮನೆ ಇದ್ದ ಕಾಂಗ್ರೆಸ್, ಈಗ ವಿದೇಶಾಂಗ ನೀತಿಯ ಬಗ್ಗೆ ನಮಗೆ ಪಾಠ ಮಾಡುತ್ತಿದೆ. ಕಾಂಗ್ರೆಸ್​ನವರಿಗೆ ವಿದೇಶಾಂಗ ನೀತಿಯೇ ಗೊತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಶಾಸ್ತ್ರೀಯ ಕನ್ನಡ ಸ್ವಾಯತ್ತತ ಕೇಂದ್ರದ ಸ್ಥಾಪನೆ ಬಗ್ಗೆ ಮೈಸೂರು ವಿವಿಯ ಕ್ರಾಫರ್ಡ್ ಹಾಲ್​ನಲ್ಲಿ ಸಭೆ ನಡೆಸಿ, ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ರಷ್ಯಾ ದೇಶವು ತನ್ನ ದೇಶದ ಭದ್ರತೆಗಾಗಿ ಯುದ್ಧ ಮಾಡುತ್ತಿದೆ ಎಂದು ರಷ್ಯಾದ ನಡೆ ಸಮರ್ಥಿಸಿಕೊಂಡರು.

ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರನ್ನ ಕರೆ ತರುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿ,  ರಷ್ಯಾದ ವಿರುದ್ಧ ನಾವು ಹೋಗಲು ಕಷ್ಟವಿದೆ. ರಷ್ಯಾ ತನ್ನ ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಉಕ್ರೇನ್ ಮೇಲೆ ಯುದ್ಧ ಮಾಡುತ್ತಿದೆ. ಭಾರತವು ರಷ್ಯಾದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ಅವಲಂಬನೆಯನ್ನು ಸೃಷ್ಟಿಸಿದ್ದು ಕಾಂಗ್ರೆಸ್​ನವರು. ರಷ್ಯಾವನ್ನ ಎದುರಾಕಿಕೊಂಡರೆ ಅದು ನಮ್ಮ ನೆರವಿಗೆ ಬರುವುದು ಕಷ್ಟ. ಆದ್ದರಿಂದ ಪ್ರಧಾನಿಯವರು ತಟಸ್ಥ ನಿಲುವು ತಾಳಿದ್ದಾರೆ. ಉಕ್ರೇನ್​​ನಲ್ಲಿ ಸಿಲುಕಿರುವ ಎಲ್ಲ ಭಾರತೀಯರನ್ನ ಸುರಕ್ಷಿತವಾಗಿ ಕರೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು.

ನೀಟ್ ಬ್ಯಾನ್ ಕಷ್ಟ: ಸಾಮಾಜಿಕ ಜಾಲತಾಣಗಳಲ್ಲಿ ನೀಟ್ ಪರೀಕ್ಷೆ ಬ್ಯಾನ್ ಮಾಡುವ ಬಗ್ಗೆ ಕ್ಯಾಂಪೇನ್ ನಡೆಯುತ್ತಿದೆ. ಆದರೆ, ನೀಟ್ ಪರೀಕ್ಷೆಯನ್ನ ನ್ಯಾಯಾಲಯದ ಆದೇಶದ ಅನುಗುಣವಾಗಿಯೇ ತರಲಾಗಿದ್ದು, 138 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ದೇಶದಲ್ಲಿ ಒಂದೂವರೆ ಲಕ್ಷ ಮೆಡಿಕಲ್ ಸೀಟ್ ಇದೆ. ಇದರಿಂದ ಪೈಪೋಟಿ ಹೆಚ್ಚಾಗಿದೆ. ‌ ಉಕ್ರೇನಲ್ಲಿ ವೈದ್ಯಕೀಯ ವ್ಯಾಸಂಗ ಮಾಡಲು ಹೋಗುವವರು ಸಹ ಬುದ್ಧಿವಂತರೇ ಎಂದು ಸಂಸದರು ಹೇಳಿದರು.

ನವೀನ್ ಸಾವಿನ ಹಿನ್ನೆಲೆಯಲ್ಲಿ ಕೆಲವರು ಮೀಸಲಾತಿಯ ವಿರುದ್ಧ ಮಾತನಾಡುತ್ತಿದ್ದಾರೆ. ಆದರೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಎಷ್ಟು ವರ್ಷ ಶೋಷಣೆಗೆ ಒಳಗಾಗಿದ್ದಾರೆ. ‌ಅವರಿಗೆ ಮೀಸಲಾತಿ ಕೊಟ್ಟಿರುವುದರಲ್ಲಿ ಯಾವ ತಪ್ಪೂ ಇಲ್ಲ. ಜಾತಿ ಬಂಧನದಿಂದ ಹೊರ ಬರೋವರೆಗೂ ಶೋಷಿತರಿಗಾಗಿ ಮೀಸಲಾತಿ ಇರುತ್ತದೆ ಎಂದು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ಹಿಂದಿನ ಲೇಖನಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ: ಜಿಲ್ಲೆಯ 6 ನಗರ ಸ್ಥಳೀಯ ಸಂಸ್ಥೆಗಳು ಸಿದ್ಧಪಡಿಸಿದ 63.75 ಕೋಟಿ ಅನುಮೋದನೆ
ಮುಂದಿನ ಲೇಖನಚೆನ್ನೈ ಮೇಯರ್ ಆಗಿ ಮೊದಲ ಬಾರಿಗೆ ದಲಿತ ಮಹಿಳೆ ಆಯ್ಕೆ