ಮನೆ ಸುದ್ದಿ ಜಾಲ ಮುಂದುವರೆದ ಕಾಳ್ಗಿಚ್ಚು: ದಕ್ಷಿಣ ಕೊರಿಯಾದಲ್ಲಿ 24 ಸಾವಿರ ಹೆಕ್ಟೇರ್​ ಅರಣ್ಯ ನಾಶ

ಮುಂದುವರೆದ ಕಾಳ್ಗಿಚ್ಚು: ದಕ್ಷಿಣ ಕೊರಿಯಾದಲ್ಲಿ 24 ಸಾವಿರ ಹೆಕ್ಟೇರ್​ ಅರಣ್ಯ ನಾಶ

0

ಸಿಯೋಲ್(ದಕ್ಷಿಣ ಕೊರಿಯಾ): ಒಂದು ವಾರದ ಹಿಂದೆ ದಕ್ಷಿಣ ಕೊರಿಯಾ ಪೂರ್ವ ಕರಾವಳಿಯ ಪರ್ವತ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದ ಕಾಳ್ಗಿಚ್ಚು ಇದುವರೆಗೆ ಸುಮಾರು 24,000 ಹೆಕ್ಟೇರ್ ಅರಣ್ಯವನ್ನು ನಾಶಪಡಿಸಿದೆ.

ಸಿಯೋಲ್‌ನಿಂದ ಆಗ್ನೇಯಕ್ಕೆ ಸುಮಾರು 330 ಕಿಲೋಮೀಟರ್​​ ದೂರದಲ್ಲಿರುವ ಪೂರ್ವ ಕರಾವಳಿ ಪಟ್ಟಣವಾದ ಉಲ್ಜಿನ್‌ನಲ್ಲಿ ಕಳೆದ ಶುಕ್ರವಾರ ಪ್ರಾರಂಭವಾದ ಬೆಂಕಿಯು ಹತ್ತಿರದ ಪ್ರದೇಶಗಳಿಗೆ ವ್ಯಾಪಿಸಿದ್ದು, ಈಗಲೂ ಮುಂದುವರೆದಿದೆ ಎಂದು ಯೋನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

2000ನೇ ಇಸವಿಯಲ್ಲಿ ಅತಿ ದೊಡ್ಡ ಕಾಳ್ಗಿಚ್ಚು ಕಾಣಿಸಿಕೊಂಡಿತ್ತು. 9 ದಿನಗಳ ಸತತ ಕಾರ್ಯಾಚರಣೆ ಬಳಿಕ ಕಾಳ್ಗಿಚ್ಚನ್ನು ನಿಯಂತ್ರಣ ಮಾಡಲಾಯಿತು. ಆ ಅವಧಿಯಲ್ಲಿ 23,794 ಹೆಕ್ಟೇರ್‌ ಕಾಡು ನಾಶವಾಗಿತ್ತು. ಈಗ ಕಾಣಿಸಿಕೊಂಡಿರುವ ಕಾಳ್ಗಿಚ್ಚು ಅದನ್ನೂ ಮೀರಿಸಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಉತ್ತರ ಜಿಯೊಂಗ್‌ಸಾಂಗ್ ಪ್ರಾಂತ್ಯದ ಉಲ್ಜಿನ್​ನಲ್ಲಿ 18,484 ಹೆಕ್ಟೇರ್‌ ನಾಶವಾಗಿದೆ. ಗ್ಯಾಂಗ್ವಾನ್ ಪ್ರಾಂತ್ಯದ ಮೂರು ನಗರಗಳಾದ ಸ್ಯಾಮ್‌ಚಿಯೋಕ್​ನಲ್ಲಿ 1,509 ಹೆಕ್ಟೇರ್, ಗ್ಯಾಂಗ್‌ನ್ಯೂಂಗ್ ನಗರದಲ್ಲಿ 1,900 ಹೆಕ್ಟೇರ್ ಮತ್ತು ಡೊಂಗ್‌ಹೇ ನಗರದಲ್ಲಿ 2,100 ಹೆಕ್ಟೇರ್ ನಾಶವಾಗಿದೆ ಎಂದು ತಿಳಿದುಬಂದಿದೆ.

ಬೆಂಕಿಯಿಂದ ನಾಶವಾದ ಪ್ರದೇಶದ ಒಟ್ಟು ವಿಸ್ತೀರ್ಣ 33,604 ಫುಟ್​ಬಾಲ್ ಕ್ರೀಡಾಂಗಣಗಳಷ್ಟಿದೆ ಎಂದು ತಿಳಿದು ಬಂದಿದೆ.ಕಾಳ್ಗಗಿಚ್ಚಿನಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬ ಮಾಹಿತಿ ದೊರೆತಿದೆ.

 358 ಮನೆಗಳಿಗೆ ಹಾನಿಯಾಗಿದ್ದು, 252 ಮನೆಗಳ ಸುಮಾರು 390 ಜನರು ಸ್ಥಳಾಂತರಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗ್ಯಾಂಗ್‌ನ್ಯೂಂಗ್ ಮತ್ತು ಡೊಂಘೆ ನಗರಗಳಲ್ಲಿ ಬೆಂಕಿ ನಿಯಂತ್ರಣದಲ್ಲಿದೆ. 1,652 ಸಿಬ್ಬಂದಿ ಮತ್ತು 372 ಅಗ್ನಿಶಾಮಕ ವಾಹನಗಳು, 88 ಹೆಲಿಕಾಪ್ಟರ್‌ಗಳು ಬೆಂಕಿ ನಂದಿಸಲು ಹರಸಾಹಸ ನಡೆಸುತ್ತಿವೆ.

ಹಿಂದಿನ ಲೇಖನಸಿಡಿ ಕೇಸ್: ಅರ್ಜಿಯ ವಿಚಾರಣೆ ಏಕ ಸದಸ್ಯ ಪೀಠಕ್ಕೆ ವರ್ಗಾವಣೆ
ಮುಂದಿನ ಲೇಖನಗರ್ಭಿಣಿ ಪತ್ನಿ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಕುಡುಕ ಪತಿ