ನವದೆಹಲಿ : ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸಿಬಿಎಸ್ಇ 9ನೇ ತರಗತಿಯ ಪಠ್ಯಪುಸ್ತಕಗಳಲ್ಲಿ ಏಕಾಏಕಿ ಬದಲಾವಣೆಯಾಗಿದ್ದು, ಶಾಲೆ ಪ್ರಾರಂಭವಾಗಿ ಎರಡು ತಿಂಗಳಾಗುತ್ತಾ ಬಂದರೂ ಮಾರುಕಟ್ಟೆಯಲ್ಲಿ ಪುಸ್ತಕಗಳು ಲಭ್ಯವಿಲ್ಲದೆ ವಿದ್ಯಾರ್ಥಿಗಳು ಹಾಗೂ ಪೋಷಕರು ಪರದಾಡುವಂತಾಗಿದೆ. ಈ ಆತಂಕದ ನಡುವೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಅಧಿಕೃತ ಸ್ಪಷ್ಟನೆ ನೀಡಿದ್ದು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಪರಿಷ್ಕೃತಗೊಂಡಿರುವ 9ನೇ ತರಗತಿಯ ಪಠ್ಯಪುಸ್ತಕಗಳ ಮುದ್ರಣ ಕಾರ್ಯವನ್ನು ‘ಯುದ್ಧೋಪಾದಿಯಲ್ಲಿ’ ನಡೆಸಲಾಗುತ್ತಿದೆ ಎಂದು ತಿಳಿಸಿದೆ.
ಈ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿತ್ತು. ಭಟ್ಕಳದ ಸುರೇಂದ್ರ ಪೈ ಎಂಬುವವರು ಈ ಸಮಸ್ಯೆಯ ಕುರಿತು ಧ್ವನಿ ಎತ್ತಿದ್ದು. “ಶಾಲೆಗಳು ಆರಂಭವಾಗಿ ಎರಡು ತಿಂಗಳಾದರೂ ಎನ್ಸಿಇಆರ್ಟಿಯಿಂದ ಸಮಾಜ ವಿಜ್ಞಾನ ಪಠ್ಯಪುಸ್ತಕ ಬಿಡುಗಡೆಯಾಗಿಲ್ಲ. ಇತರ ವಿಷಯಗಳ ಪುಸ್ತಕಗಳೂ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಶಾಲೆಗಳು ಆನ್ಲೈನ್ ಪಿಡಿಎಫ್ ಆಧರಿಸಿ ಪಾಠ ಮಾಡುತ್ತಿವೆ. ಹೀಗಿರುವಾಗ ಏಕಾಏಕಿ ಬದಲಾವಣೆ ಮಾಡುವ ಅಗತ್ಯವೇನಿತ್ತು? ಮುಂದಿನ ವರ್ಷ 10ನೇ ತರಗತಿಗೂ ಪಠ್ಯ ಬದಲಾಗಲಿದ್ದು, ಆ ಪುಸ್ತಕಗಳನ್ನಾದರೂ ಡಿಸೆಂಬರ್ ಒಳಗೆ ಒದಗಿಸಿ” ಎಂದು ಅವರು ಆಗ್ರಹಿಸಿದ್ದರು.
ಎನ್ಸಿಇಆರ್ಟಿ ನೀಡಿದ ಸ್ಪಷ್ಟನೆ ಏನು? – ಹೊಸ ಪಠ್ಯಕ್ರಮದ ಜಾರಿಯಿಂದಾಗಿ ಬೇಡಿಕೆ ತೀವ್ರವಾಗಿ ಹೆಚ್ಚಾಗಿದೆ ಹಾಗೂ ಪೂರೈಕೆಯಲ್ಲಿ ತಾತ್ಕಾಲಿಕ ವ್ಯತ್ಯಯವಾಗಿದೆ ಎಂಬುದನ್ನು ಎನ್ಸಿಇಆರ್ಟಿ ಒಪ್ಪಿಕೊಂಡಿದೆ. ಶುಕ್ರವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ, “ಈ ತಾತ್ಕಾಲಿಕ ಬೇಡಿಕೆಯನ್ನು ಸರಿದೂಗಿಸಲು ಮಂಡಳಿಯು ಶ್ರಮಿಸುತ್ತಿದೆ. ದೇಶಾದ್ಯಂತ ಪುಸ್ತಕಗಳ ವಿತರಣೆಯನ್ನು ಸುಗಮಗೊಳಿಸಲು ಬಹುಮಾರ್ಗಗಳನ್ನು ಬಳಸಿಕೊಳ್ಳಲಾಗುತ್ತಿದೆ. ದೆಹಲಿಯಲ್ಲಿರುವ ಕೇಂದ್ರ ಕಚೇರಿ ಹಾಗೂ ಎಲ್ಲಾ ಪ್ರಾದೇಶಿಕ ಕಚೇರಿಗಳಲ್ಲಿ ವಾರಾಂತ್ಯದಲ್ಲೂ ಮಾರಾಟ ಕೌಂಟರ್ಗಳನ್ನು ತೆರೆದಿಡಲಾಗಿದೆ. ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಇಡುವ ಶಾಲೆಗಳು ಮತ್ತು ಸಂಸ್ಥೆಗಳಿಗೆ ನೇರವಾಗಿ ಪಠ್ಯಪುಸ್ತಕಗಳನ್ನು ಪೂರೈಸಲಾಗುತ್ತಿದೆ” ಎಂದು ತಿಳಿಸಿದೆ.
ಸಮಾಜ ವಿಜ್ಞಾನ ಪುಸ್ತಕ ಶೀಘ್ರದಲ್ಲೇ ಲಭ್ಯ – ವಿದ್ಯಾರ್ಥಿಗಳನ್ನು ಅತಿ ಹೆಚ್ಚು ಕಾಡುತ್ತಿರುವ ಸಮಾಜ ವಿಜ್ಞಾನ ಪಠ್ಯಪುಸ್ತಕವು ಅಂತಿಮ ಹಂತದ ತಯಾರಿಯಲ್ಲಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಮಂಡಳಿ ಖಚಿತಪಡಿಸಿದೆ. ಉಳಿದ ಎಲ್ಲಾ 9ನೇ ತರಗತಿಯ ಪಠ್ಯಪುಸ್ತಕಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ದೊಡ್ಡ ಮಟ್ಟದ ಪಠ್ಯಕ್ರಮ ಸುಧಾರಣೆಗಳು ನಡೆಯುವಾಗ ಇಂತಹ ತಾತ್ಕಾಲಿಕ ಪೂರೈಕೆ ಸಮಸ್ಯೆಗಳು ಸಾಮಾನ್ಯ, ಆದರೆ ಶೀಘ್ರದಲ್ಲೇ ಎಲ್ಲವೂ ಸಹಜ ಸ್ಥಿತಿಗೆ ಮರಳಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಉಚಿತ ಆನ್ಲೈನ್ ಪಿಡಿಎಫ್ ಲಿಂಕ್ ಲಭ್ಯ – ಪಠ್ಯಪುಸ್ತಕಗಳು ಭೌತಿಕವಾಗಿ ಕೈಸೇರುವವರೆಗೆ ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ರೀತಿಯ ತೊಂದರೆಯಾಗದಿರಲು, ಮಂಡಳಿಯು ಸುಮಾರು ಎರಡು ವಾರಗಳ ಹಿಂದೆಯೇ ಎಲ್ಲಾ ಹೊಸ ಪುಸ್ತಕಗಳ ಡಿಜಿಟಲ್ ಆವೃತ್ತಿಗಳನ್ನು ಸಂಪೂರ್ಣ ಉಚಿತವಾಗಿ ಒದಗಿಸಿದೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು NCERT ಯ ಅಧಿಕೃತ ವೆಬ್ಸೈಟ್, ದೀಕ್ಷಾ ಪೋರ್ಟಲ್ ಮತ್ತು ಇ-ಪಾಠಶಾಲೆ ಮೂಲಕ ಈ ಪುಸ್ತಕಗಳನ್ನು ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದರ ಜೊತೆಗೆ ಆಯ್ದ ಇ-ಕಾಮರ್ಸ್ ವೇದಿಕೆಗಳಲ್ಲೂ ಈ ಪುಸ್ತಕಗಳು ಖರೀದಿಗೆ ಲಭ್ಯವಿವೆ ಎಂದು ಎನ್ಸಿಇಆರ್ಟಿ ಸ್ಪಷ್ಟಪಡಿಸಿದೆ. ಕೆಳಗಿನ ಲಿಂಕ್ ಬಳಿಸಿ ಪುಸ್ತಕ ಡೌನ್ಲೋಡ್ ಮಾಡಿಕೊಳ್ಳಬಹುದು. https://epathshala.nic.in/process.php?id=students&type=eTextbooks&ln=en


















