ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ (Darshan) ಅವರಿಗೆ ತಕ್ಷಣಕ್ಕೆ ಜಾಮೀನು ಸಿಗುವ ಸಾಧ್ಯತೆ ಇಲ್ಲ ಎನ್ನುವುದು ಬಹುತೇಕ ಖಚಿತವಾಗಿದೆ. ಪ್ರಕರಣದ ವಿಚಾರಣೆ ಮುಂದಿನ ವರ್ಷದ ಮೇ ತಿಂಗಳೊಳಗೆ ಪೂರ್ಣಗೊಳ್ಳದಿದ್ದರೆ ಮಾತ್ರ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಸ್ಪಷ್ಟಪಡಿಸಿದೆ. ಇದರ ನಡುವೆಯೇ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ದರ್ಶನ್ ಕೇಸ್ ವಿಚಾರಣೆ ನಡೆಸುತ್ತಿರುವ ಜಡ್ಜ್ ಹಾಗೂ ಕೋರ್ಟ್ ಎರಡೂ ಬದಲಾಗಲಿವೆ.
ಕೆಲವು ಕೋರ್ಟ್ ಗಳ ಪೊಲೀಸ್ ಠಾಣೆ ವ್ಯಾಪ್ತಿಯನ್ನು ಮರು ವಿಂಗಡಣೆ ಮಾಡಲಾಗಿದ್ದು, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಈ ಪ್ರಕರಣವನ್ನು ಸಿಸಿಹೆಚ್ 57ನೇ ಕೋರ್ಟ್ ನಿಂದ ಸಿಸಿಹೆಚ್ 59ನೇ ಕೋರ್ಟ್ ಗೆ ವರ್ಗಾವಣೆ ಮಾಡಲು ಆದೇಶ ನೀಡಲಾಗಿದೆ. ಈ ಸಂಬಂಧ ಸಿಟಿ ಸಿವಿಲ್ ಕೋರ್ಟ್ ಡೆಪ್ಯುಟಿ ರಿಜಿಸ್ಟ್ರಾರ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಜೂನ್ 1ರಿಂದ ಪ್ರಕರಣ ವರ್ಗಾವಣೆ ಪ್ರಕ್ರಿಯೆ ಜಾರಿಗೆ ಬರಲಿದೆ. ಇನ್ನು ಮುಂದೆ ಈ ಹೈಪ್ರೊಫೈಲ್ ಪ್ರಕರಣದ ವಿಚಾರಣೆಯನ್ನು ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ನಡೆಸಲಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷಿಗಳ ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಕಠಿಣ ಸೂಚನೆ ನೀಡಿದೆ. ಈ ಆದೇಶದ ಪ್ರತಿಯನ್ನು ದರ್ಶನ್ ಪರ ವಕೀಲರು ಈಗಾಗಲೇ ಸೆಷನ್ಸ್ ಕೋರ್ಟ್ ಗೆ ಸಲ್ಲಿಸಿದ್ದಾರೆ. ಇದರ ಹಿನ್ನೆಲೆ ಸ್ಥಳೀಯ ಕೋರ್ಟ್ ವಾರದಲ್ಲಿ ಕನಿಷ್ಠ ಎರಡು ಬಾರಿ ಅಥವಾ ನಾಲ್ಕು ದಿನಗಳ ಕಾಲ ನಿರಂತರ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದಕ್ಕೂ ಮೊದಲು ಸುಪ್ರೀಂ ಕೋರ್ಟ್ ನಲ್ಲಿ ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿತ್ತು. ಇದೀಗ ಇನ್ನೂ ಒಂದು ವರ್ಷ ಜಾಮೀನು ಸಿಗುವ ಸಾಧ್ಯತೆ ಕಡಿಮೆ ಎನ್ನುವ ಬೆಳವಣಿಗೆ ದರ್ಶನ್ ಹಾಗೂ ಅವರ ಕುಟುಂಬದಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.


















