ಮನೆ ಸುದ್ದಿ ಜಾಲ Darshan Bail Hearing: ನಟ ದರ್ಶನ್ ಪಾಲಿಗೆ ಇಂದು ಮಹತ್ವದ ದಿನ! ಸುಪ್ರೀಂ ಕೋರ್ಟ್’ನಿಂದಸಿಗುತ್ತಾ ಸಿಹಿಸುದ್ದಿ?

Darshan Bail Hearing: ನಟ ದರ್ಶನ್ ಪಾಲಿಗೆ ಇಂದು ಮಹತ್ವದ ದಿನ! ಸುಪ್ರೀಂ ಕೋರ್ಟ್’ನಿಂದಸಿಗುತ್ತಾ ಸಿಹಿಸುದ್ದಿ?

0

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ Darshan Thoogudeepa ಅವರಿಗೆ ಇಂದು ಅತ್ಯಂತ ಮಹತ್ವದ ದಿನವಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿರುವ ನಟ ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿದ್ದು, ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಪ್ರಕರಣದ ವಿಚಾರಣೆ ನಿಧಾನಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆ, ದರ್ಶನ್ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಕಳೆದ ಆಗಸ್ಟ್ 14, 2025 ರಂದು ಸುಪ್ರೀಂ ಕೋರ್ಟ್ ದರ್ಶನ್ ಸೇರಿದಂತೆ ಇತರ ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಪಡಿಸಿತ್ತು. ಆ ಬಳಿಕದಿಂದ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ಸಲ್ಲಿಸಿರುವ ಹೊಸ ಜಾಮೀನು ಅರ್ಜಿಯಲ್ಲಿ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿರುವ ವಿಚಾರವನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಜೊತೆಗೆ ಜೈಲಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ದರ್ಶನ್ ತಮ್ಮ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ.

ನಟ ದರ್ಶನ್ ತಮ್ಮ ಅರ್ಜಿಯಲ್ಲಿ ಜೈಲಿನಲ್ಲಿರುವ ಪರಿಸ್ಥಿತಿ ಮಾನಸಿಕ ಹಾಗೂ ದೈಹಿಕವಾಗಿ ತೊಂದರೆ ಉಂಟುಮಾಡುತ್ತಿದೆ ಎಂದು ಹೇಳಿದ್ದಾರೆ. ಸಹ ಕೈದಿಗಳಿಂದ ಬೆದರಿಕೆ ಹಾಗೂ ನಿಂದನೆ ಎದುರಿಸುತ್ತಿದ್ದೇನೆ. ನಿಯಮ ಮೀರಿ ನನ್ನನ್ನು ಕ್ವಾರಂಟೈನ್ ಸೆಲ್ ನಲ್ಲಿ ಇರಿಸಲಾಗಿದೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಜೈಲಿನಲ್ಲಿನ ಪರಿಸ್ಥಿತಿ ಅಮಾನವೀಯವಾಗಿದೆ ಎಂದು ಸಹ ಆರೋಪಿಸಲಾಗಿದೆ.

ಇನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವೇಗವಾಗಿ ನಡೆಯುತ್ತಿಲ್ಲ ಎಂಬ ವಾದವನ್ನು ಸಹ ದರ್ಶನ್ ಪರ ವಕೀಲರು ಮುಂದಿಟ್ಟಿದ್ದಾರೆ. ಪ್ರಕರಣದಲ್ಲಿ ಒಟ್ಟು 270ಕ್ಕೂ ಹೆಚ್ಚು ಸಾಕ್ಷಿಗಳಿದ್ದು, ಇದುವರೆಗೆ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ಸುಮಾರು 8 ತಿಂಗಳು ಕಳೆದರೂ ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ದರ್ಶನ್ ಪರ ವಕೀಲರು ವಾದಿಸಿದ್ದಾರೆ.

ಈ ಹಿನ್ನೆಲೆ ವಿಚಾರಣೆ ಪೂರ್ಣಗೊಳ್ಳುವವರೆಗೆ ಜಾಮೀನು ನೀಡಬೇಕು ಎಂದು ದರ್ಶನ್ ಮನವಿ ಮಾಡಿದ್ದಾರೆ. ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸುತ್ತಿಲ್ಲ ಎಂಬ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ಸಹ ವರದಿ ಕೇಳಿತ್ತು. ಈ ಸಂಬಂಧ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ತಮ್ಮ ವರದಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ, ದರ್ಶನ್ ಸಲ್ಲಿಸಿದ್ದ ಇತರೆ ಅರ್ಜಿಗಳ ಕಾರಣಕ್ಕೂ ಪ್ರಕರಣದ ವಿಚಾರಣೆ ತಡವಾಗಿದೆ ಎಂದು ವಿಶೇಷ ಸಾರ್ವಜನಿಕ ಅಭಿಯೋಜಕರು ವಾದ ಮಂಡಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ ಇನ್ನೂ 262 ಸಾಕ್ಷಿಗಳ ವಿಚಾರಣೆ ಬಾಕಿಯಿದ್ದು, ವಿಚಾರಣೆ ಪೂರ್ಣಗೊಳ್ಳಲು ಇನ್ನೂ ಹೆಚ್ಚಿನ ಸಮಯ ಬೇಕಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಇಂದು ನಡೆಯಲಿರುವ ಸುಪ್ರೀಂ ಕೋರ್ಟ್ ವಿಚಾರಣೆಯ ಮೇಲೆ ನಟ ದರ್ಶನ್ ಅಭಿಮಾನಿಗಳ ಕಣ್ಣು ನೆಟ್ಟಿದೆ. ದರ್ಶನ್ ಗೆ ಮತ್ತೆ ಜಾಮೀನು ಸಿಗುತ್ತದೆಯೇ ಅಥವಾ ನ್ಯಾಯಾಲಯ ಹಿಂದಿನ ತೀರ್ಪನ್ನೇ ಮುಂದುವರಿಸುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ. ಸ್ಯಾಂಡಲ್ ವುಡ್ ಸೇರಿದಂತೆ ರಾಜ್ಯದಾದ್ಯಂತ ಈ ಪ್ರಕರಣದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.