ಮನೆ ಕಾನೂನು ಮೃತ ಮಗಳ ಜೀವನಾಂಶ ಬಾಕಿ ಮೊತ್ತ ಪಡೆಯಲು ಆಕೆಯ ತಾಯಿ ಅರ್ಹಳು: ಮದ್ರಾಸ್ ಹೈಕೋರ್ಟ್

ಮೃತ ಮಗಳ ಜೀವನಾಂಶ ಬಾಕಿ ಮೊತ್ತ ಪಡೆಯಲು ಆಕೆಯ ತಾಯಿ ಅರ್ಹಳು: ಮದ್ರಾಸ್ ಹೈಕೋರ್ಟ್

0

ತಾಯಿಯು ತನ್ನ ಮೃತ ಮಗಳ ಆಸ್ತಿಗೆ ಕಾನೂನುಬದ್ಧ ಉತ್ತರಾಧಿಕಾರಿಯಾಗಿದ್ದು ಮಗಳ ಜೀವನಾಂಶದ ಸಂಚಿತ ಬಾಕಿಯನ್ನು ಪಡೆಯಲು ಆಕೆ ಅರ್ಹಳು ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಅಣ್ಣಾದೊರೈ ಮತ್ತು ಜಯಾ ನಡುವಣ ಪ್ರಕರಣ].

Join Our Whatsapp Group

ದಾವೆ ಹೂಡಿದ್ದ ಕಾಲದಲ್ಲಿ ತನ್ನ ವಿಚ್ಛೇದಿತ ಪತ್ನಿ ಸಾವನ್ನಪ್ಪಿದ ಬಳಿಕ ತನ್ನ ಅತ್ತೆಗೆ ₹ 6.2 ಲಕ್ಷ ಮೊತ್ತದ ಬಾಕಿ ಇರುವ ಜೀವನಾಂಶ ಮೊತ್ತವನ್ನು ನೀಡಬೇಕು ಎಂದು ಮ್ಯಾಜಿಸ್ಟ್ರೇ ನ್ಯಾಯಾಲಯ ಅಣ್ಣಾದೊರೈ ಎಂಬುವವರಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅಣ್ಣಾದೊರೈ ಹೈಕೋರ್ಟ್‌ ಮೊರೆ ಹೋಗಿದ್ದರು. ಏಪ್ರಿಲ್ 21 ರಂದು ನೀಡಲಾದ ತೀರ್ಪಿನಲ್ಲಿ, ಹೈಕೋರ್ಟ್‌ ನ್ಯಾಯಮೂರ್ತಿ ವಿ ಶಿವಜ್ಞಾನಂ ಅವರು ಅಣ್ಣಾದೊರೈ ಸಲ್ಲಿಸಿದ್ದ ಕ್ರಿಮಿನಲ್‌ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ.

ಹಿಂದೂ ಉತ್ತರಾಧಿಕಾರ ಕಾಯಿದೆಯ ಸೆಕ್ಷನ್ 14ರ ಉಪ- ಸೆಕ್ಷನ್‌ 1 ಮತ್ತು 2 ರ ಸಹವಾಚನದಿಂದಾಗಿ, ಜೀವನಾಂಶ ಬಾಕಿಯನ್ನು ಹಿಂದೂಗಳು ಡಿಕ್ರಿಯೊಂದರ ಅಡಿ ಸಂಪಾದಿಸಿದ ಚರ ಮತ್ತು ಸ್ಥಿರ ಆಸ್ತಿ ಎಂದು ಪರಿಗಣಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ ಎಂಬುದಾಗಿ ನ್ಯಾಯಾಲಯ ಹೇಳಿದೆ.

ಜೀವನಾಂಶವು ಮೃತಳ ವೈಯಕ್ತಿಕ ಹಕ್ಕು ಮತ್ತು ಆಕೆ ಸಾವನ್ನಪ್ಪಿದ ನಂತರ ಆ ಹಕ್ಕು ಇಲ್ಲವಾಗುತ್ತದೆ ಎಂದು ಅರ್ಜಿದಾರರಾದ ಪತಿ ವಾದಿಸಿದ್ದರು. ವಿಚ್ಛೇದಿತ ಪತ್ನಿಯ ಮರಣದ ನಂತರ ಜೀವನಾಂಶವನ್ನು ಪಡೆಯುವ ಹಕ್ಕು ಉಳಿಯುವುದಿಲ್ಲವಾದ್ದರಿಂದ, ಆಕೆಯ ತಾಯಿಯು ಪ್ರಕರಣವನ್ನು ಮುಂದುವರೆಸಲು ಸಮರ್ಥರಲ್ಲ ಮತ್ತು ಬಾಕಿ ಉಳಿದಿರುವ ಜೀವನಾಂಶ ಪಡೆಯಲು ಅರ್ಹರಲ್ಲ ಎಂಬುದು ಅವರ ವಾದವಾಗಿತ್ತು.

ಆದರೆ ಹಿಂದೂ ಉತ್ತರಾಧಿಕಾರ ಕಾಯಿದೆಯ ಸೆಕ್ಷನ್ 15 (1) (ಸಿ) ಪ್ರಕಾರ, ತಾಯಿ ತನ್ನ ಮಗಳ ಆಸ್ತಿಗೆ ಅರ್ಹಳಾಗಿದ್ದು ಆ ತತ್ವ ಪ್ರಸ್ತುತ ಪ್ರಕರಣಕ್ಕೆ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಮಗಳ ಆಸ್ತಿಯಲ್ಲಿ ತಾಯಿಗೆ ಹಕ್ಕಿರುವುದರಿಂದ ಪ್ರಸ್ತುತ ಪ್ರಕರಣದಲ್ಲಿ ಪ್ರತಿವಾದಿ ತಾಯಿಯು ತನ್ನ ಮಗಳ ಮರಣದವರೆಗೆ ಬಾಕಿ ಇರುವ ಜೀವನಾಂಶಕ್ಕೆ ಅರ್ಹಳಾಗಿದ್ದಾಳೆ ಎಂಬ ಪ್ರತಿವಾದಿ ವಕೀಲರ ವಾದವನ್ನು ಅದು ಪುರಸ್ಕರಿಸಿದೆ.

ಹಿಂದಿನ ಲೇಖನಮನ್ ಕಿ ಬಾತ್ ಮುಗಿಸಿದ್ದಕ್ಕೆ ಅಭಿನಂದನೆಗಳು, ಈಗಲಾದರೂ ಜನ್ ಕಿ ಬಾತ್ ಕೇಳುತ್ತೀರಾ: ಸಿದ್ದರಾಮಯ್ಯ ಪ್ರಶ್ನೆ
ಮುಂದಿನ ಲೇಖನವಿಧಾನಸಭೆ ಚುನಾವಣೆಯಲ್ಲಿ ಎಲ್ಲೆಲ್ಲಿ ಶಕ್ತಿ ಇದೆಯೊ, ಅಲ್ಲೆಲ್ಲಾ ಗೆಲ್ಲಬೇಕು: ಬಿ.ಎಲ್.ಸಂತೋಷ್