ಮನೆಯಂಗಳದಿ ಇಂದು
ತೈಲದ ಹಣತೆ ಹಚ್ಚಿ ಬಿಡಿ
ಜೊತೆ ಜೊತೆಗೆ ಹಾಗೆ,
ಮನದಂಗಳದಿ ಒಂದು
ಜ್ಞಾನದ ಪ್ರಣತೆ ಹಚ್ಚಿ ಬಿಡಿ,
ಹೊರಗೆ ಬೆಳಕಿನ ದೀಪಾವಳಿ
ಒಳಗೆ ಅರಿವಿನ ಪ್ರಭಾವಳಿ.
ಪ್ರೀತಿರ್ಗಮಯ
ಜ್ಯೋತಿ ಜ್ವಲಿಸುವುದು ಬೆಳಕಿಗಾಗಿ,
ಪ್ರೀತಿ ಸ್ಫುರಿಸುವುದು ಬದುಕಿಗಾಗಿ.
ಜ್ಯೋತಿಯಿಂದ ಜ್ಯೋತಿ ಉರಿಸೆ,
ಬೆಳಕು ಪ್ರಜ್ವಲಿಸಿ ಭವ್ಯ ಕಾಂತಿ.
ಪ್ರೀತಿಯಿಂದ ಪ್ರೀತಿ ಬೆರೆಸೆ,
ಬದುಕು ಉಜ್ವಲಿಸಿ ದಿವ್ಯ ದೀಪ್ತಿ.
ಅವತಾರ
ವಾಮನನಾಗಿ ತುಳಿದದ್ದು
ಬಲಿಯ ಶಿರವನ್ನಲ್ಲ
ಅವನೊಳಗೆ ಅಡಗಿದ್ದ
ನಾನೆಂಬ ಅಹಂಕಾರವನ್ನು.
ತ್ರಿವಿಕ್ರಮನಾಗಿ ಬೆಳೆದದ್ದು
ದೈವತ್ವವ ಸಾಕ್ಷೀಕರಿಸಲಿಕ್ಕಲ್ಲ
ದಾನವತ್ವ ದಮನಿಸಲಿಕ್ಕೆ.
ಜೋಕೆ
ಸಾಲುದೀಪ ಸಿಂಗಾರದೆದುರು
ಪಟಾಕಿಗಳ ಅಬ್ಬರ ವ್ಯರ್ಥ.
ಬದುಕು ಬೆಳಗಿಸಿ ಬೆಳಕಿಡುವ
ದೀಪಾವಳಿ ಹಬ್ಬದಂದು
ಸಿಡಿಮದ್ದು ಸುಡುತ ಅಪಾಯ
ಆಮಂತ್ರಿಸುದರಲಿಲ್ಲ ಅರ್ಥ.
ಆಚರಣೆ
ದೀಪ್ತಿ ಉರಿಸಿ ಹರಿಸಬೇಕು ಬೆಳಕು
ಬೀದಿಯವರೆಲ್ಲ ನೆನಪಿಡುವಂತೆ.
ಪ್ರೀತಿ ಸ್ಫುರಿಸಿ ನಡೆಸಬೇಕು ಬದುಕು
ಊರವರೆಲ್ಲಾ ಸದಾ ನೆನೆವಂತೆ.
- ರಮೇಶ್ ಗುಬ್ಬಿ.