ಮನೆ ರಾಜ್ಯ ಕರ್ನಾಟಕ ವಿದ್ಯುತ್ ಬೈಕ್, ಟ್ಯಾಕ್ಸಿ ಯೋಜನೆ-2021 ರದ್ದಿಗೆ ಒತ್ತಾಯ

ಕರ್ನಾಟಕ ವಿದ್ಯುತ್ ಬೈಕ್, ಟ್ಯಾಕ್ಸಿ ಯೋಜನೆ-2021 ರದ್ದಿಗೆ ಒತ್ತಾಯ

0

ಮೈಸೂರು(Mysuru): ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021 ರದ್ದು ಪಡಿಸುವಂತೆ ಹಾಗೂ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿ ಯೋಜನೆಗೆ ಅನುಮತಿ ನೀಡಬಾರದೆಂದು ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿದ್ದು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಇಂದು ಜಿಲ್ಲಾಧಿಕಾರಿಗಳ ಮುಂಭಾಗ  ಜಮಾವಣೆಗೊಂಡ ಪ್ರತಿಭಟನಾಕಾರರು, ರಾಜ್ಯದಲ್ಲಿ  ಪ್ರತಿದಿನ 50 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಆಟೋ ಚಾಲಕರು ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ 15 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವಕಾಶವನ್ನು ನೀಡಲಾಗಿದೆ. ಮಾತ್ರವಲ್ಲದೇ ಚಾಲನಾ ಪತ್ರ ನವೀಕರಣ, ಜೀವಿತಾವಧಿ ತೆರಿಗೆ, ಫಿಟ್’ನೆಸ್  ಪ್ರಮಾಣ ಪತ್ರ, ಇನ್ಶೂರೆನ್ಸ್, ರಹದಾರಿ ನವೀಕರಣ, ಇಂಧನ, ಆಟೋರಿಕ್ಷಾ ಖರೀದಿ ಸೇರಿದಂತೆ ಬಿಡಿ ಭಾಗಗಳ ಖರೀದಿ ಮಾಡುವ ಮೂಲಕ ಸರ್ಕಾರದ  ಆರ್ಥಿಕತೆಗೆ ಸಾಕಷ್ಟು ಕೊಡುಗೆಯನ್ನು ಆಟೋ ರಿಕ್ಷಾ ಉದ್ಯಮ ನೀಡಿದೆ ಎಂದರು.

ಆದರೆ ಕಳೆದ 2 ವರ್ಷಗಳಿಂದ ಆ್ಯಪ್ ಆಧಾರಿತ ಅನಧಿಕೃತ ವೈಟ್’ಬೋರ್ಡ್ ಬೈಕ್ ಟ್ಯಾಕ್ಸಿಗಳ ಹಾವಳಿ ರಾಜ್ಯದ ಪ್ರಮುಖ ನಗರಗಳಲ್ಲಿ ಹೆಚ್ಚಾಗಿದೆ. ಇದರಿಂದ ಆಟೋ ಚಾಲಕರ ಸಂಪಾದನೆಯನ್ನು ಹಗಲು ದರೋಡೆ ಮಾಡಲಾಗುತ್ತಿದೆ. ಚಾಲಕರು ಜೀವನ ನಡೆಸುವುದು ದುಸ್ತರವಾಗಿದೆ. ಇದರ ವಿರುದ್ಧ ಅನೇಕ ಸಂಘಟನೆಗಳು ನಿರಂತರ ಹೋರಾಟ ಮಾಡಿ ರ್ಯಾಪಿಡೋ ವೈಟ್ ಬೋರ್ಡ್ ಟ್ಯಾಕ್ಸಿಗಳನ್ನು ಅಡ್ಡಗಟ್ಟಿ ಆರ್’ಟಿಓ ಅಧಿಕಾರಿಗಳಿಗೆ ಹಿಡಿದುಕೊಟ್ಟು ದಂಡ ಹಾಕಿಸಲಾಯಿತು ಎಂದು ತಿಳಿಸಿದರು.

ಇಂತಹ ಟ್ಯಾಕ್ಸಿಗಳಿಂದಾಗಿ ವಿದ್ಯಾರ್ಥಿಗಳು ತಪ್ಪು ದಾರಿ ಹಿಡಿಯುವ ಅವಕಾಶವಿರುತ್ತದೆ. ಮತ್ರವಲ್ಲದೇ ಆಟೋರಿಕ್ಷಾದ ಸಂಪಾದನೆಯನ್ನೇ ನಂಬಿಕೊಂಡಿರುವ ಆಟೋ ಮತ್ತು ಟ್ಯಾಕ್ಸಿ ಚಾಲಕರ ಬದುಕು ಆರ್ಥಿಕ ಸಂಕಷ್ಟಗಳಿಗೆ ಸಿಲುಕಿದೆ.

ಆದ್ದರಿಂದ ಸರ್ಕಾರವು ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ – 2021 ನ್ನು ರದ್ದುಗೊಳಿಸಬೇಕು. ಹಾಗೂ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿ ಯೋಜನೆಗಳಿಗೆ ಅನುಮತಿ ನೀಡಬಾರದೆಂದು ಒಕ್ಕೂಟ ಆಗ್ರಹಿಸಿದೆ.

ಆಟೋರಿಕ್ಷಾ ಚಾಲಕರಿಗೆ ಅನುಕೂಲವಾಗುವಂತೆ ಎಲೆಕ್ಟ್ರಿಕ್ ಆಟೋರಿಕ್ಷಾಗಳಿಗೆ ಶೇ.50 ಸಹಾಯದನ (ಸಬ್ಸಿಡಿ)  ನೀಡುವಂತೆ ಮನವಿ ಮಾಡಲಾಗಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವುದಾಗಿ ಒಕ್ಕೂಟವು ಎಚ್ಚರಿಕೆ ನೀಡಿದೆ.

ಪ್ರತಿಭಟನೆಯಲ್ಲಿ ಆದರ್ಶ ಆಟೋ & ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ಅಧ್ಯಕ್ಷ ಎಂ.ಮಂಜುನಾಥ್, ಪೀಸ್ ಆಟೋ & ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ರಘು ನಾರಾಯಣ ಗೌಡ, ಫೆಡರೇಷನ್ ಆಫ್ ಕರ್ನಾಟಕ ಆಟೋರಿಕ್ಷಣಾ ಡ್ರೈವರ್ಸ್ ಯೂನಿಯನ್ ರಾಜ್ಯಾಧ್ಯಕ್ಷ ಬಿ.ವಿ.ರಾಘವೇಂದ್ರ, ಸಂಯುಕ್ತ ಕರ್ನಾಟಕ ಆಟೋರಿಕ್ಷಾ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಶ್ರೀನಿವಾಸ ಮಿತ್ರ, ಮೈಸೂರು ಆಟೋರಿಕ್ಷಾ ಮಾಲೀಕರ ಮತ್ತು ಚಾಲಕರ ವಿವಿದೋದ್ದೇಶ ಸೊಸೈಟಿ ಅಧ್ಯಕ್ಷ ರಾಮಸ್ವಾಮಿ, ಆನಂದ್.ಹೆಚ್, ಬಿ.ಉಮೇಶ್, ರವಿಕುಮಾರ್, ಚಂದ್ರಕುಮಾರ್, ಕುಮಾರ್, ಜಿ.ರವಿಕುಮಾರ್ ಉಪಸ್ಥಿತರಿದ್ದರು.

ಹಿಂದಿನ ಲೇಖನಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ಉಚಿತ: ಡಿ.ಕೆ. ಶಿವಕುಮಾರ್ ಘೋಷಣೆ
ಮುಂದಿನ ಲೇಖನಜಯಚಾಮರಾಜೇಂದ್ರ ಅರಸು ಬೋರ್ಡಿಂಗ್‌ ಶಾಲೆ ಮರುನಾಮಕರಣದೊಂದಿಗೆ ಫೆ.22ಕ್ಕೆ ಪುನರಾರಂಭ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌