ಆದಿಶೇಷನ ನಿವಾಸವಾದ ಪಾತಾಳಲೋಕಕ್ಕೆ ಅಧೋ ಭಾಗದಲ್ಲಿ ಬ್ರಹ್ಮಾಂಡ ಗತ ಗರ್ಭೋದಕಗಳಿವೆ. ಈ ಉದಕ ಲೋಕಗಳಿಗೂ, ಪಾತಾಳಲೋಕಕ್ಕೂ ನಡುವೆ ನಾನಾ ರೀತಿಯ ನರಕಲೋಕಗಳಿವೆ.
ನರಕದಲ್ಲಿ ಅತಿ ಧಾರುಣವಾದ ಅಸ್ತ್ರ ವಹಿಯು ಪ್ರತಿನಿತ್ಯವೂ ಪ್ರಜ್ವಲಿಸುತ್ತಿರುತ್ತದೆ. ಪಾಪಪ್ರವರ್ತರಾಗಿ ಜೀವಿಸಿ ಮರಣಾ ನಂತರ ಕರ್ಮಫಲವನ್ನು ಅನುಭವಿಸುವುದಕ್ಕಾಗಿ ಜೀವಿಗಳು ಈ ಘೋರ ನರಕಗಳಲ್ಲಿ ಪ್ರವೇಶಿಸಿ ಕಠಿಣ ಶಿಕ್ಷೆಗಳನ್ನು ಅನುಭವಿಸುತ್ತಾರೆ.
ನರಕಗಳು ಶತ ಸಹಸ್ರಾಧಿಕ ಸಂಖ್ಯೆಯಲ್ಲಿವೆ. ಧರ್ಮಕರ್ತನಾದ ಯಮನು ಇವುಗಳ ಸರ್ವಾಧಿಪತಿ. ಅರಶಿರಂ, ಅಪ್ರತಿಷ್ಯಂ, ಅವೀಚಿ, ಅವೀಚಿತಮ, ಅನಿಪತ್ರವನಂ, ಕಾಲಸೂತ್ರ, ಕೃಷ್ಣ, ಕ್ರಿಮಿಭೋಜನ, ಕ್ರಿಮೀಶ, ತಪ್ತಕುಂಭ, ತಮಸ, ತಾಲ, ದಾರುಣ, ಪಾಪ, ಪೂಯವಾಹ, ಮಹಾಜ್ವಾಲ, ರುಧಿರಾಂದ, ರೋಧ, ರೌರವ, ಲವಣ, ಲಾಲಾಭಕ್ಷ, ವಗ್ನಿಜ್ವಾಲ, ವಿಮೋಚನ, ವಿಠಾಸನ, ವೈತರಣೀ, ಶ್ವಭೋಜನ, ಸುದಂಶ, ಸೂಕರ ಮುಂತಾದ ಪಾಪ ಕರ್ಮಗಳ ಲಕ್ಷಣಗಳಾದ ಈ ನರಕಗಳು. ಭಯಾನಕ ಚಿತ್ರಹಿಂಸೆಗೆ ನಿದರ್ಶನಗಳಾಗಿವೆ. ಪಾಪವರ್ತನರಾದ ದುಷ್ಕರ್ಮರು ತಮ್ಮ ತಮ್ಕರ್ಮಫಲಗಳನ್ನಾಧರಿಸಿ ಆಯಾ ನರಕಗಳನ್ನು ಪಡೆಯುವರು. ನ್ಯಾಯ ಸ್ಥಾನದಲ್ಲಿ ಧರ್ಮಾಧಿಕಾರಿಯ ಸಮ್ಮುಖದಲ್ಲಾಗಲೀ, ನಾಲ್ವರು ಸೇರಿರುವ ಧರ್ಮಾಧರ್ಮಗಳನ್ನು ವಿಚಾರಿಸುವ ಪ್ರದೇಶದಲ್ಲಾಗಲೀ, ದೋಷಿಗಳಿಗೆ ಸಹಕರಿಸಬಾರದು. ಪಕ್ಷಪಾತದಿಂದ ಸುಳ್ಳು ಸಾಕ್ಷ್ಯಗಳನ್ನು ಹೇಳಿ, ಅಧರ್ಮಪರರಿಗೆ ಸಹಕರಿಸಿ ಧರ್ಮವನ್ನು ನಾಶಮಾಡುವ ಪಾಪಾತ್ಮನು ರೌರವ ಮಹಾನರಕದಲ್ಲಿ ಬಿದ್ದು ಕೃತಾಂತ ಶಿಕ್ಷೆಯನ್ನು ಅನುಭವಿಸುತ್ತಾನೆ.
ಗರ್ಭಸ್ಥ ಶಿಶುವನ್ನು ಸಾಯಿಸಿದವನು, ಗೋಹತ್ಯೆ ಮಾಡಿದವನು, ದಾರಿಗಳ್ಳತನವನ್ನು ಮಾಡಿದವನು ರೋಧನರಕವನ್ನು ತಲುಪಿ ನರಕವನ್ನು ಅನುಭವಿಸುತ್ತಾನೆ. ಬ್ರಹ್ಮಹತ್ಯೆ ಮಾಡಿದವನು. ಸುವರ್ಣ ಸಂಪತ್ತನ್ನು ಅಪಹರಿಸಿದವನು, ಮದ್ಯಪಾನ ಮಾಡಿದವನು ಇಂತಹವರೊಂದಿಗೆ ಸ್ನೇಹ ಮಾಡಿದವನು ಸೂಕರ ನರಕವನ್ನು,…’ ಪಡೆಯುತ್ತಾನೆ. ಕ್ಷತ್ರಿಯ ವೈಶ್ಯ ಕುಲಸ್ಥರನ್ನು ನಾಶ ಮಾಡಿದವನು, ಆಧ್ಯಾತ್ಮ ಗುರುಗಳ-/ ಪತ್ನಿಯೊಂದಿಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿರುವ ನಯವಂಚಕನು, ತಾಲನರಕವನ್ನು ಸೇರುತ್ತಾನೆ. ಸಹೋದರಿಯರೊಂದಿಗೆ ಸಂಗಮಿಸಿದ ನೀಚನು, ರಾಯಭಾರಿಯನ್ನು ವಧಿಸಿದವನು, ಕೊಲೆಗಡುಕನು, ಭೀಕರವಾದ ತಪ್ತಕುಂಭನರಕವನ್ನು ಸೇರಿ ಪಾಪಫಲಿತವನ್ನು ಅನುಭವಿಸುತ್ತಾನೆ. ಆಪ್ತರನ್ನು, ಸ್ನೇಹಿತರನ್ನು, ಅಪರಿಚಿತರನ್ನು ನಂಬಿಸಿ ಮೋಸ ಮಾಡಿದ ವಿಶ್ವಾಸಘಾತುಕರು, ಸ್ವಲಾಭಕ್ಕಾಗಿ ಹೆಂಡತಿಯನ್ನು ಮಾರಿಕೊಳ್ಳುವವರು, ಕಾರಾಗಾರ ಕಾವಲುಗಾರರು, ಕುದುರೆ ವ್ಯಾಪಾರಿಗಳು ತಪ್ತಲೋಹ ನರಕದಲ್ಲಿನ ನರಕಕ್ಕೆ ಗುರಿಯಾಗುತ್ತಾರೆ. ಶಾರೀರಕ ಬಯಕೆಯಿಂದ ಕಣ್ಣು ಕಾಣದೇ ಸಂಬಂಧಗಳನ್ನು ಲೆಕ್ಕಿಸದೇ ಪುತ್ರಿಯೊಂದಿಗೂ, ಸೊಸೆಯೊಂದಿಗೂ ಸಂಗಮ ದೋಷಕ್ಕೆ ಪಾಲ್ಪಟ್ಟ ದುರ್ಮಾರ್ಗರಿಗೆ ಹಾಜ್ವಾಲೆಯಂತಹ ನರಕವು ಪ್ರಾಪ್ತಿಯಾಗುತ್ತದೆ. ವಿದ್ಯೆಯನ್ನು ಉಪದೇಶಿಸಿದ ಗುರುಗಳನ್ನು ಅಗೌರವಪಡಿಸಿ ಕೆಡುಕನ್ನುಂಟುಮಾಡುವವರು, ವೇದಗಳನ್ನು ದೂಷಿಸಿ ಅಶೌಚಪಡಿಸುವವರು, ವೇದವಿಕ್ರಯರು, ಅನ್ಯ ಕಾಂತೆಯರೊಂದಿಗೆ ಕಾಮಾಚಾರರಾಗಿ ಪ್ರವರ್ತಿಸುವವರು ಲವಣ ನರಕವನ್ನು ಪ್ರವೇಶಿಸುತ್ತಾರೆ.
ಆಚಾರ ಸಂಪ್ರದಾಯಗಳಲ್ಲಿನ ಒಳಿತನ್ನು ವ್ಯತಿರೇಕಿಸಿ, ಸನ್ಮಾರ್ಗವನ್ನು ತಪ್ಪಿದವರು, ಪರರ ಸ್ವತ್ತನ್ನು ಬಯಸುವ ಚೋರರು, ವಿಮೋಹ ನರಕಕ್ಕೆ ಹೋಗುತ್ತಾರೆ. ತಂದೆಯನ್ನು ದ್ವೇಷಿಸಿದ ಕೃತಘ್ನನು, ಬ್ರಹ್ಮಜ್ಞರನ್ನು, ದೈವವನ್ನು ದೂಷಿಸಿದ ಅವಿವೇಕರು, ಅಮೂಲ್ಯ ಸಂಪತ್ತುಗಳನ್ನು ಹಾಳು ಮಾಡಿದ ಬುದ್ದಿಹೀನರು ಕ್ರಿಮಿಭೋಜನ ನರಕವನ್ನು ಅನುಭವಿಸುತ್ತಾರೆ. ಪರರಿಗೆ
ಅಪಕಾರವನ್ನುಂಟುಮಾಡಿ ಕ್ಷುದ್ರಶಕ್ತಿಗಳನ್ನು ಆರಾಧಿಸಿದ ದುರ್ಜನರು ಆತನ
ಅನುಚರರೆಲ್ಲರೂ ಕ್ರಿಮಿಶ ನರಕದಲ್ಲಿ ಬೀಳುತ್ತಾರೆ. ಪರಬ್ರಹ್ಮ ಸ್ವರೂಪವಾದಂತಹ ಅನ್ನವನ್ನು ತಾನು ಭುಜಿಸುವುದಕ್ಕೂ ಮೊದಲೇ ದೇವತೆಗಳಿಗೂ, ಋಷಿಗಳಿಗೂ ಪಿತೃದೇವತೆಗಳಿಗೂ ಅರ್ಪಿಸಿ ಋಣವಿಮೋಚನೆ ಪಡೆಯದ ದೌರ್ಭಾಗ್ಯರು ಲಾಲಾಭಕ್ಷ ನರಕದಲ್ಲಿ ಬಿದ್ದು ಶಿಕ್ಷೆಯನ್ನು ಅನುಭವಿಸುತ್ತಾರೆ. ಶತ್ರು ಸಂಹಾರಕ್ಕಾಗಿ ಪ್ರಯೋಗಿಸುವ ಬಾಣಗಳನ್ನು ತಯಾರಿಸಿದ ಆಯುಧಕಾರರು ವೇದಕ ನರಕಕ್ಕೂ, ಇತರೆ ಆಯುಧಗಳನ್ನು ಶಸ್ತ್ರಗಳನ್ನು ತಯಾರಿಸಿದ ಕಾರ್ಮಿಕರು ಅತಿಭಯಂಕರವಾದ ವಿಶಸನ ನರಕವನ್ನು ಅನುಭವಿಸುತ್ತಾರೆ. ಈ ರೀತಿಯಾಗಿ ಜೀವಿಗಳು ಆಚರಿಸುವ ಒಂದೊಂದು ದುಷ್ಕರ್ಮಗಳಿಗೂ ಒಂದು ವಿಧವಾದ ನರಕವು ಸಂಪ್ರಾಪ್ತಿಯಾಗುತ್ತದೆ. ಧರ್ಮ ವಿರುದ್ಧವಾಗಿ ತನ್ನ ಅನುಯಾಯಿಗಳಿಂದ ಬಹುಮಾನಗಳನ್ನು ಸ್ವೀಕರಿಸಿದ ಮದೋನ್ಮತ್ತರು, ಕ್ಷುದ್ರ ಶಕ್ತಿಗಳಿಗೆ ಆಹುತಿಗಳನ್ನು ಇಡುವ ಆಚಾರಹೀನರು ಜಾತಕ ಫಲಗಳನ್ನು ಹೇಳಲಿಕ್ಕೆಂದು ಜ್ಯೋತಿಶಾಸ್ತ್ರವನ್ನು ಕಲಿತವರು ಆಧೋಮುಖ ನರಕಕ್ಕೆ ಹೋಗುವರು. ಮನೆಯಲ್ಲಿ ಮಕ್ಕಳಿಗೆ ತಿಳಿಯದಂತೆ ಮಧುರ ಭಕ್ಷ್ಯಗಳನ್ನು ರಹಸ್ಯವಾಗಿ ಭುಜಿಸಿದ ನಿರ್ದಯಾತರು, ಜೇನುತುಪ್ಪ, ಎಳ್ಳೆಣ್ಣೆ, ತುಪ್ಪ, ಹಾಲು, ಮೊಸರು, ಮಜ್ಜಿಗೆ, ಬೆಲ್ಲ, ಮದ್ಯ ಮಾಂಸಗಳನ್ನು ವಿಕ್ರಯಿಸಿದ ಬ್ರಾಹ್ಮಣರು, ಪ್ರಾಣಿ ಪಕ್ಷಿಗಳನ್ನು ಸ್ವತಂತ್ರವಾಗಿ ಸಂಚರಿಸಲು ಬಿಡದೇ ಬಂಧನದಲ್ಲಿಟ್ಟು ಬೆಳೆಸುವವರು, ಮೀನುಗಳನ್ನಿಡಿದು ಜೀವಿಸುವವರು, ವೇಶೈಯರ ಮೇಲೆ ಆಧಾರವಾಗಿ ಜೀವಿಸುವ ನೀಚರು, ವಿಷಪ್ರಾಶನ ಮಾಡಿಸುವವರು. ರಹಸ್ಯಗಳನ್ನು ಬಯಲು ಮಾಡುವವರು, ಪತ್ನಿಯನ್ನು ವ್ಯಭಿಚಾರಕ್ಕೆ ಪ್ರೋತ್ಸಾಹಿಸುವವರು, ಪರ್ವದಿನ ಸಮಯಗಳಲ್ಲಿ ವಿಧಿನಿಯಮಗಳನ್ನು ಪಾಲಿಸದವರು, ಮನೆಗೆ ಬೆಂಕಿ ಹಚ್ಚುವವರು, ವಿಶ್ವಾಸಘಾತುಕರು, ತಾಂತ್ರಿಕರು, ಕ್ರತು ಸಮಯದಲ್ಲಿ ಸೋಮರಸವನ್ನು ಮಾರುವ ಬ್ರಾಹ್ಮಣರು, ನಯವಂಚಕರು ಇವರೆಲ್ಲರೂ ಘೋರವಾದ ರುದಿರಾ ನರಕವನ್ನು ಅನುಭವಿಸುತ್ತಾರೆ. ಜೇನುಗೂಡನ್ನು ಕೀಳುವವನು, ಗ್ರಾಮಕ್ಕೆ ಕೆಡುಕನ್ನುಂಟು ಮಾಡುವವನು, ಅಸತ್ಯವಾದಿಗಳು, ವೈತರಣಿ ನರಕವನ್ನು ಅನುಭವಿಸುತ್ತಾರೆ. ಬೇರೆಯವರ ಭೂಮಿಯನ್ನು ಆಕ್ರಮಿಸಿದವರು, ವಂಶಾಚಾರವನ್ನು ತಪ್ಪಿ ನಡೆಯುವವರು, ಕಲ್ಮಷಾತ್ಮರು, ಮೋಸ ಮಾಡಿ ಜೀವಿಸುವವರು.
ಪರಭಾಗ್ಯವನ್ನು ಉಪಯೋಗಿಸಿಕೊಂಡು ಜೀವಿಸುವವರು ಅಧಮವಾದ ಕೃಷ್ಣ ನರಕಕ್ಕೆ ತಳ್ಳಲ್ಪಡುತ್ತಾರೆ. ಅರಣ್ಯಗಳಲ್ಲಿ ಬೆಳೆಯುವ ವನವೃಕ್ಷಗಳನ್ನು ಕತ್ತರಿಸಿ ಜೀವನಾಧಾರವನ್ನಾಗಿ ಮಾಡಿಕೊಳ್ಳುವವರು, ಅನಿಪತ್ರ ವನದಲ್ಲಿ ಸಿಕ್ಕಿ ಅನೇಕ ವರ್ಷಗಳ ಕಾಲ ದುರ್ಬರ ವೇದನೆಯನ್ನು ಅನುಭವಿಸುತ್ತಾರೆ. ಉಣ್ಣೆಗಾಗಿ, ಚರ್ಮ, ಮಾಂಸಗಳಿಗಾಗಿ ಕುರಿಗಳನ್ನು ಬೆಳೆಸಿ ಕತ್ತರಿಸುವವರು. ಜಂತು ಪ್ರಾಣಿಗಳನ್ನು ಬೇಟೆಯಾಡುವವರು ವಹಿ ಜ್ವಾಲೆ ನರಕಕ್ಕೆ ಹೋಗುತ್ತಾರೆ. ಪ್ರಾಯಶ್ಚಿತ್ತವಿಲ್ಲದ ವ್ರತಲೋಪವನ್ನು ಆಚರಿಸುವವನು ಆಶ್ರಮ ಧರ್ಮಚ್ಯುತಿಯನ್ನು ಹೊಂದಿದವನು, ಕೊಟ್ಟ ಮಾತನ್ನು ತಪ್ಪುವವನು ಸುದಂಶ ನರಕಕ್ಕೆ ಹೋಗಿ ಘೋರ ಶಿಕ್ಷೆಯನ್ನು ಅನುಭವಿಸುತ್ತಾನೆ. ಹಗಲಿನಲ್ಲಿ ಮಲಗುವ ಬ್ರಹ್ಮಚಾರಿ, ತನಗೆ ತಿಳಿಯದೆಯೇ ವೀರ್ಯಸ್ಥಲನ ಮಾಡುವ ಕಾಮುಕನು, ತಮ್ಮ ಸಂತಾನವು ಎಷ್ಟೇ ಜ್ಞಾನವೃದ್ಧಿಗಳಾಗಿದ್ದರೂ ಅವರಿಂದ ಆಧ್ಯಾತ್ಮಿಕೋಪದೇಶವನ್ನು ಪಡೆಯುವವರು ಶ್ವಭೋಜನ ನರಕವನ್ನು ಪ್ರವೇಶಿಸಿ ಯಾತನೆಗಳನ್ನು ಅನುಭವಿಸುವರು. ಈ ರೀತಿಯಾದ ಉಪಭೋದ್ಯವಾದವುಗಳೇ ಅಲ್ಲದೇ ಇನ್ನೂ ಅನೇಕ ಶತ ಸಹಸ್ರ ವಿಧಗಳ ಮಹಾನರಕಗಳು ಪಾತಾಳ ಲೋಕದ ಅಧೋ ಭಾಗದಲ್ಲಿ ಬ್ರಹ್ಮಾಂಡಗತ ಗರ್ಭೋದಕಗಳ ಮೇಲೆ ಕಾಣಿಸುತ್ತವೆ. ಮಾನವರು ಆಚರಿಸುವ, ಆಚರಿಸುವಂತಹ ಪಾಪಕೃತ್ಯಗಳು ಎಷ್ಟಿವೆಯೋ ಆಯಾ ದುಷ್ಕೃತ್ಯಗಳಿಗೆ ಅನುಗುಣವಾಗಿ ಅವರು ಅನುಭವಿಸುವ ನರಕಗಳು ಅಷ್ಟಿವೆ. ಪುಣ್ಯಾತ್ಮರು ಸ್ವರ್ಗನಿವಾಸಕ್ಕೆ ಹೋಗಿ ವರ್ಣನಾತೀತವಾದ ಸುಖಗಳನ್ನು ಅನುಭವಿಸಿದಂತೆಯೇ ದೇಶಾಚಾರ, ಕುಲಾಚಾರಗಳನ್ನು ಅತಿಕ್ರಮಿಸುವ ಪಾಪಾತ್ಮರು ಭಯಾನಕ ನಿಲಯಗಳಿಗೆ ಹೋಗಿ ನರಕಕೂಪದಲ್ಲಿ ಸಿಕ್ಕಿಕೊಂಡು ಕಠಿಣವಾದ ಶಿಕ್ಷೆಗಳನ್ನು ಅನುಭವಿಸುತ್ತಾರೆ. ಎಂಬುದಾಗಿ ಪರಾಶರ ಮಹರ್ಷಿಯು ನರಕ ಸ್ವರೂಪ ವಿಧಿ ವಿಧಾನಗಳೊಂದಿಗೆ ಶ್ರದ್ಧೆಯಿಂದ ತನ್ನ ವಚನಗಳನ್ನು ಆಲಿಸುತ್ತಿದ್ದ ಶಿಷ್ಯನನ್ನು ಪ್ರೀತಿಯಿಂದ ಕಂಡು ಮಂದಹಾಸವನ್ನು ವ್ಯಕ್ತಪಡಿಸಿದರು. ನಂತರ ಆ ಮಹನೀಯನು ತನ್ನ ಶಿಷ್ಯನ ಮನಸ್ಸಿನಲ್ಲಿ ಉದ್ಭವಿಸುತ್ತಿರುವ ಆಲೋಚನೆಗಳನ್ನು ಕೂಲಂಕುಷವಾಗಿ ಅರಿತು “ನರಕ ಲೋಕದ ಸ್ವರೂಪವನ್ನು ತಿಳಿದು ಪಾಪಪುಣ್ಯ ಫಲಾನುಭವವನ್ನು ಗ್ರಹಿಸಿದ ವಿವೇಕಿಗಳೂ ಸಹ ತಿಳಿದೋ, ತಿಳಿಯದೆಯೋ ಪಾಪಕೃತ್ಯಗಳನ್ನು ಆಚರಿಸಿದಾಗ ಅವರ ಕರ್ತವ್ಯವೇನು? ತಾವು ಮಾಡಿದ ತಪ್ಪನ್ನು ತಿಳಿದು ಪಶ್ಚಾತ್ತಾಪದೊಂದಿಗೆ ನರಳುತ್ತಿರುವವರಿಗೆ ನರಕ ಪ್ರಾಪ್ತಿಯನ್ನು ಹೊರತುಪಡಿಸಿದರೇ ಬೇರೆ ದಾರಿ ಇಲ್ಲವೇ?” ಎಂಬುದನ್ನು ಶಿಷ್ಯನು ಕೇಳುವುದಕ್ಕೂ ಮೊದಲೇ ಪರಾಶರರು ಆತನ ಸಂದೇಹವನ್ನು ಈ ರೀತಿ ಬಗೆಹರಿಸಿದರು.