ಬಾಗಲಕೋಟೆ: ದಕ್ಷಿಣ ಕಾಶಿ ಹಾಗೂ ಚಾಲುಕ್ಯರ ಕಾಲದಿಂದಲೂ ಪ್ರಖ್ಯಾತಿ ಪಡೆದಿರುವ ಮಹಾಕೂಟದ ಪುಷ್ಕರಣಿಯಲ್ಲಿ ಸ್ನಾನ ಮಾಡಿದರೆ ಸಕಲ ಪಾಪ ಕರ್ಮಗಳು ಪರಿಹಾರ ಆಗುತ್ತವೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆ ಬಾದಾಮಿ ತಾಲೂಕಿನ ಮಹಾಕೂಟಕ್ಕೆ ವಿವಿಧ ಪ್ರದೇಶಗಳಿಂದ ಭಕ್ತರು ಹಾಗೂ ಪ್ರವಾಸಿಗರು ಆಗಮಿಸಿ, ಐತಿಹಾಸಿಕ ಹಿನ್ನೆಲೆ ಪಡೆದಿರುವ ಈ ಪುಷ್ಕರಣಿಯಲ್ಲಿ ಮಿಂದೆದ್ದು, ಮಹಾಕೂಟೇಶ್ವರನ ದರ್ಶನ ಪಡೆದು ಪೂಜೆ ಸಲ್ಲಿಸಿ ಪಾವನರಾಗುತ್ತಾರೆ. ಶಿವನ ಚರ್ತುಮುಖ ಮೂರ್ತಿ ಹೊಂದಿರುವ ಈ ಪುಷ್ಕರಣಿಯಲ್ಲಿ ಚಾಲುಕ್ಯ ಕಾಲದ ಸಮಯದಲ್ಲಿ ಋಷಿ ಮುನಿಗಳು ಸ್ನಾನ ಮಾಡಿ, ಪೂಜೆ ತಪಸ್ಸು ಮಾಡುತ್ತಿದ್ದರು ಎಂದು ಇತಿಹಾಸದಲ್ಲಿ ಹೇಳಲಾಗುತ್ತಿದೆ. ಸುತ್ತಲೂ ದಟ್ಟಾರಣ್ಯ ಇರುವ ಈ ಕ್ಷೇತ್ರದಲ್ಲಿ ಚಾಲುಕ್ಯ ಕಾಲದಲ್ಲಿ ನಿರ್ಮಾಣ ಆಗಿರುವ ಚಿಕ್ಕ ಪುಟ್ಟ ದೇವಾಲಯಗಳಿವೆ. ಈಶ್ವರ, ಲಿಂಗು ಸೇರಿದಂತೆ ವಿವಿಧ ದೇವರುಗಳ ಮೂರ್ತಿಗಳು ಇವೆ.
ಹೀಗಾಗಿ ಈ ಪುಷ್ಕರಣಿಯಲ್ಲಿ ಎಂತಹ ಬೀರು ಬೇಸಿಗೆಯಲ್ಲಿಯೂ ನೀರು ಬತ್ತುವುದಿಲ್ಲ. ಋಷಿ ಮುನಿಗಳು ವಾಸ ಹಾಗೂ ತಪಸ್ಸು ಮಾಡಿದ ಹಿನ್ನೆಲೆ ಈ ಪುಷ್ಕರಣಿ ಎಂದಿಗೂ ಬತ್ತಿರುವುದಿಲ್ಲ ಎನ್ನುತ್ತಾರೆ ಸ್ಥಳೀಯ ಅರ್ಚಕರು. ಜೊತೆಗೆ ಬೇಸಿಗೆ ಬಿಸಿಲ ತಾಪ ತಣಿಸಿಕೊಳ್ಳಲು ಪುಷ್ಕರಣಿಯಲ್ಲಿ ಸ್ನಾನ ಮಾಡಿ ಎಂಜಾಯ್ ಮಾಡಲು ಕುಟುಂಬ ಸಮೇತ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಹಾಗೂ ಪ್ರವಾಸಿಗರು ಬರುತ್ತಾರೆ. ಈಗ ಅಧಿಕ ಮಾಸದ ನಿಮಿತ್ತ ಇಂತಹ ಐತಿಹಾಸಿಕ ತಾಣ ಹಾಗೂ ಪವಾಡ ಪುರುಷರ ವಾಸ ಸ್ಥಾನದ ಹಿನ್ನೆಲೆ ಭಕ್ತರು ಆಗಮಿಸಿ ಪುಷ್ಕರಣಿಯಲ್ಲಿ ಮಿಂದೆದ್ದರೆ ತಮ್ಮ ಪಾಪ ಕರ್ಮಗಳು ಕಳೆದು ಹೋಗಲಿದೆ ಎಂದು ಭಕ್ತರ ನಂಬಿಕೆಯಾಗಿದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಸ್ಥಳದಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ. ಸೂಕ್ತ ರಸ್ತೆ, ವಾಹನ ಸೌಕರ್ಯ ಹಾಗೂ ಹೋಟೆಲ್ ಜೊತೆಗೆ ಭದ್ರತೆ ವಿಷಯವಾಗಿ ಪೊಲೀಸ್ ಸಿಬ್ಬಂದಿ ನಿಯೋಜನೆ ಇಲ್ಲದೇ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ. ದಕ್ಷಿಣ ಕಾಶಿ ಎಂದು ಹೆಸರು ವಾಸಿಯಾಗಿರುವ ಈ ಸ್ಥಳಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಮಿಸಿ, ಪ್ರಚಾರ ಜೊತೆಗೆ ಅಭಿವೃದ್ದಿಗೆ ಒತ್ತು ನೀಡುವಂತಾಗಬೇಕು ಎಂಬುದು ಭಕ್ತರ ಅಭಿಪ್ರಾಯವಾಗಿದೆ ಎನ್ನಲಾಗುತ್ತಿದೆ.
ಈ ಕುರಿತು ಭಕ್ತರು ಒಬ್ಬರು ದಕ್ಷಿಣ ಕಾಶಿಯೆಂದೇ ಪ್ರಸಿದ್ಧವಾದ ಶ್ರೀ ಮಹಾಕೂಟೇಶ್ವರ ಸನ್ನಿಧಾನದಲ್ಲಿ ನಾವಿದ್ದೀವಿ. ಇಲ್ಲಿ ಕ್ಷೇತ್ರದ ಮಹಿಮೆ ಏನೆಂದರೆ ಈ ಪುಷ್ಕರಣಿಯಲ್ಲಿ ನೀರು ಹನ್ನೆರಡು ತಿಂಗಳ ಯಾವುದೇ ಕಾಲದಲ್ಲಿ ಬಂದ್ರು ನೀರು ಬತ್ತಿರುವುದಿಲ್ಲ. ಇಲ್ಲಿ ಸ್ನಾನ ಮಾಡೋದ್ರಿಂದ ದೋಷ, ಪಾಪ ಪರಿಹಾರ ಆಗುತ್ತೆ. ಈಗ ಅಧಿಕ ಮಾಸ, ಆದ ಕಾರಣ ಇಲ್ಲಿ ಎಲ್ಲರೂ ರಜೆ ಇರೋದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಸಾರ್ವಜನಿಕರಲ್ಲಿ ವಿನಂತಿ ಮಾಡುತ್ತೇನೆ ಎಂದು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅವರು ಉತ್ತರ ಕಾಶಿ ಹಾಗೂ ಸೋಮನಾಥ, ಕೇದಾರನಾಥ ಎಲ್ಲಾ ಕಡೆನೂ ಹೋಗಿ ಬಂದಿದ್ದಾರೆ. ನಮ್ಮ ಉತ್ತರ ಕರ್ನಾಟಕದ ಸುಪ್ರಸಿದ್ಧ ಚಾಲುಕ್ಯರ ನಾಡು ಇಮ್ಮಡಿ ಪುಲಿಕೇಶಿಯವರು ಆಳಿದಂತ, ಅವರ ನಿರ್ಮಾಣಿಸಿದಂತ ಈ ಕ್ಷೇತ್ರಕ್ಕೆ ಬಂದು ಇಲ್ಲಿ ದರ್ಶನ ಪಡ್ಕೊಂಡು ಹೋಗ್ಬೇಕು. ಇಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸವನ್ನು ಮಾಡಬೇಕಂತ ನರೇಂದ್ರ ಮೋದಿಯವರಲ್ಲಿ ಎಲ್ಲರ ಪರವಾಗಿ ಮನವಿ ಮಾಡುತ್ತೇನೆ ಎಂದರು ಎನ್ನಲಾಗಿದೆ.

















