ಮನೆ ರಾಷ್ಟ್ರೀಯ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ; ಆರ್‌ಸಿಸಿ ಕೋಚಿಂಗ್ ಸೆಂಟರ್ ಮಾಲೀಕ ಬಂಧನ..!

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ; ಆರ್‌ಸಿಸಿ ಕೋಚಿಂಗ್ ಸೆಂಟರ್ ಮಾಲೀಕ ಬಂಧನ..!

0

ಮುಂಬೈ : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮಹಾರಾಷ್ಟ್ರದ ಲಾತೂರ್‌ನಲ್ಲಿ ರೇಣುಕೈ ರಸಾಯನಶಾಸ್ತ್ರ ತರಗತಿಗಳ ಸಂಸ್ಥಾಪಕ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್‌ನನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ. ಸಿಬಿಐ ಭಾನುವಾರ ಶೋಧ ನಡೆಸಿದ ಸಮಯದಲ್ಲಿ ಮೋಟೆಂಗಾಂವ್ಕರ್ ಮೊಬೈಲ್‌ನಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ಪತ್ತೆಯಾಗಿದೆ. ಬಳಿಕ ಶಿವರಾಜ್‌ನನ್ನು ಬಂಧಿಸಲಾಗಿದೆ.

ನೀಟ್ ಯುಜಿ ಪತ್ರಿಕೆ ಸೋರಿಕೆ ಮತ್ತು ಪ್ರಸರಣದಲ್ಲಿ ಭಾಗಿಯಾಗಿರುವ ಸಂಘಟಿತ ಗ್ಯಾಂಗ್‌ನ ಸಕ್ರಿಯ ಸದಸ್ಯ ಮೋಟೆಗಾಂವ್ಕರ್ ಎಂದು ಸಿಬಿಐ ಆರೋಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೋಟೆಗಾಂವ್ಕರ್ ಇತರ ಆರೋಪಿಗಳೊಂದಿಗೆ ಪಿತೂರಿ ನಡೆಸಿ 2026ರ ನೀಟ್ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳನ್ನು ಏಪ್ರಿಲ್ 23ರಂದು ಪರೀಕ್ಷೆಗೆ ಮುಂಚಿತವಾಗಿ ಪಡೆದಿದ್ದಾರೆ. ಪತ್ರಿಕೆಯನ್ನು ಹಲವಾರು ವ್ಯಕ್ತಿಗಳಿಗೆ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಶಿವರಾಜ್ ರಘುನಾಥ್ ತರಬೇತಿ ಕೇಂದ್ರವು ಮಹಾರಾಷ್ಟ್ರದ ಲಾತೂರ್‌ನಲ್ಲಿರುವ ಮುಖ್ಯ ಶಾಖೆ ಸೇರಿದಂತೆ ಒಂಬತ್ತು ಶಾಖೆಗಳನ್ನು ಹೊಂದಿದೆ. ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಸಿಬಿಐ ಎಫ್‌ಐಆರ್ ದಾಖಲಿಸಿದ್ದು, ತನಿಖೆಗಾಗಿ ತಂಡಗಳನ್ನು ರಚಿಸಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ದೆಹಲಿ, ಜೈಪುರ, ಗುರುಗ್ರಾಮ್, ನಾಸಿಕ್, ಪುಣೆ, ಲಾತೂರ್ ಮತ್ತು ಅಹಲ್ಯಾನಗರದಿಂದ 10 ಆರೋಪಿಗಳನ್ನು ಬಂಧಿಸಲಾಗಿದೆ.

ಶಿವರಾಜ್ ಬಂಧನಕ್ಕೂ ಮುನ್ನ ಸಿಬಿಐ ರಸಾಯನಶಾಸ್ತ್ರ ಉಪನ್ಯಾಸಕ ಪಿವಿ ಕುಲಕರ್ಣಿ ಮತ್ತು ಜೀವಶಾಸ್ತ್ರ ಉಪನ್ಯಾಸಕಿ ಮನೀಶಾ ಮಾಂಧರೆ ಅವರನ್ನು ಬಂಧಿಸಿತ್ತು. ಇಬ್ಬರೂ ಮನೀಶಾ ವಾಘ್ಮಾರೆ ಎಂಬ ಮಹಿಳೆಯ ಮೂಲಕ ಪರಸ್ಪರ ಪರಿಚಿತರಾಗಿದ್ದು, ಅವರು ಕೂಡ ಸಿಬಿಐ ವಶದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.