ಕನ್ನಡ ಚಿತ್ರರಂಗದ ಹಿರಿಯ ನಟ ಡಾ. ರಾಜ್ಕುಮಾರ್ ಅವರ ಸ್ಮಾರಕದ ಕುರಿತಾಗಿ ನಟ ಚೇತನ್ ಅಹಿಂಸಾ ಅವರ ವಿವಾದಾತ್ಮಕ ಹೇಳಿಕೆಯು ಇತ್ತೀಚೆಗೆ ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿತ್ತು. ಈ ಬಗ್ಗೆ ಹಿರಿಯ ನಟ ನವರಸನಾಯಕ ಜಗ್ಗೇಶ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. “ಅಲ್ಪ ಬುದ್ಧಿಯ ಮಾತಿಗೆ ಧಿಕ್ಕಾರವಿರಲಿ” ಎಂದು ಪರೋಕ್ಷವಾಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಹಿರಿಯರು ಪೂರ್ವಜರಿಗೆ ಸಮಾನ, ಜಗ್ಗೇಶ್ ತಮ್ಮ ಪೋಸ್ಟ್ನಲ್ಲಿ, ಹಿರಿಯರ ಮಹತ್ವವನ್ನು ಸ್ಮರಿಸುವ ಮೂಲಕ ಆರಂಭಿಸಿದ್ದಾರೆ. “ನಮ್ಮ ತಂದೆ-ತಾಯಿ, ಅಜ್ಜ-ಅಜ್ಜಿ ಮತ್ತು ನಮ್ಮ ವಂಶಾವಳಿಯ ಹಿರಿಯರು ನಮಗೆ ಎಷ್ಟು ಮುಖ್ಯವೋ, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿ ಮಾದರಿಯಾದ ಹಿರಿಯರೂ ನಮಗೆ ಅಷ್ಟೇ ಸಮಾನರು. ಅವರು ನಮಗೆ ದಾರಿದೀಪವಾಗಿದ್ದವರು” ಎಂದು ಹೇಳುವ ಮೂಲಕ ಸಾಧಕರನ್ನು ಗೌರವಿಸುವುದು ಕನಿಷ್ಠ ಜವಾಬ್ದಾರಿ ಎಂದು ನೆನಪಿಸಿದ್ದಾರೆ.

ಅಣ್ಣಾವ್ರು ಮಾತನಾಡಿದ್ರೆ ಸರ್ಕಾರ ಬದಲಾಗ್ತಿತ್ತು, 1954ರ ಕಾಲಘಟ್ಟವನ್ನು ನೆನಪಿಸಿಕೊಂಡ ಜಗ್ಗೇಶ್, “ಕನ್ನಡ ಚಿತ್ರರಂಗಕ್ಕೆ ಯಾವುದೇ ಬೆಲೆ ಇಲ್ಲದ ಕಾಲದಲ್ಲಿ, ಸರಿಯಾದ ಬೆಳಕು ಮತ್ತು ಹೊಟ್ಟೆಗೆ ಪೌಷ್ಟಿಕ ಆಹಾರವೂ ಇಲ್ಲದ ಕಷ್ಟದ ದಿನಗಳಲ್ಲಿ ರಾಜ್ಕುಮಾರ್ ಅಂತಹ ಹಿರಿಯರು ಈ ರಂಗವನ್ನು ಕಟ್ಟಿ ಬೆಳೆಸಿದರು. ಅವರು ಬೆವರು ಸುರಿಸಿ ನಮಗೆ ಇಂದು ಒಂದು ಅರಮನೆಯಂತಹ ಚಿತ್ರರಂಗವನ್ನು ಬಿಟ್ಟು ಹೋಗಿದ್ದಾರೆ.
ಅವರ ಶಕ್ತಿ ಎಂಥದ್ದೆಂದರೆ, ಅಂದು ಅವರು ಒಂದು ಬಾರಿ ಧ್ವನಿ ಎತ್ತಿದ್ದರೆ ಸರ್ಕಾರವೇ ಬದಲಾಗುತ್ತಿತ್ತು. ಅಂತಹ ಮಹಾನ್ ಸಾಧಕ ನಿಧನರಾದಾಗ, ಇಡೀ ಚಿತ್ರರಂಗ ಮತ್ತು ಸರ್ಕಾರ ಗೌರವ ಸಲ್ಲಿಸಿ ಅವರಿಗೆ ಕಲಾವಿದರ ವೇದಿಕೆಯಲ್ಲೇ ಚಿರನಿದ್ರೆಗೆ ಅವಕಾಶ ಮಾಡಿಕೊಟ್ಟಿದೆ” ಎಂದು ಅಣ್ಣಾವ್ರ ಶಕ್ತಿಯನ್ನು ಬಣ್ಣಿಸಿದ್ದಾರೆ. ನಟರ ಅಹಂಕಾರಕ್ಕೆ ಜಗ್ಗೇಶ್ ಟಾಂಗ್, ಹೆಸರು ಉಲ್ಲೇಖಿಸದೆ ಚೇತನ್ ಅವರ ಹೇಳಿಕೆಯನ್ನು ಟೀಕಿಸಿದ ಜಗ್ಗೇಶ್, “ಒಂದು ಅಥವಾ ಎರಡು ಸಿನಿಮಾಗಳು ಹಿಟ್ ಆದ ತಕ್ಷಣ ವಿಶ್ವವೀರರಂತೆ ಮಾತನಾಡುವ ಸಂಸ್ಕೃತಿ ಈಗ ಹುಟ್ಟಿಕೊಂಡಿದೆ. ಹಿರಿಯರ ಮೌಲ್ಯ ತಿಳಿಯದೆ, ಕೇವಲ ಪ್ರಚಾರಕ್ಕಾಗಿ ಅಥವಾ ಅಹಂಕಾರದಿಂದ ಹಿರಿಯರ ಬಗ್ಗೆ ಮಾತನಾಡುವುದು ಅಸಹ್ಯ ತರಿಸುತ್ತದೆ.
ಇಂತಹ ಮಾತುಗಳು ಮನಸ್ಸಿಗೆ ತುಂಬಾ ನೋವುಂಟು ಮಾಡಿವೆ” ಎಂದು ಆಕ್ರೋಶ ಹೊರಹಾಕಿದ್ದಾರೆ. ಅಂತಿಮವಾಗಿ ಯುವ ಕಲಾವಿದರಿಗೆ ಎಚ್ಚರಿಕೆ ಮತ್ತು ಸಲಹೆ ನೀಡಿರುವ ಅವರು, “ಒಳ್ಳೆಯ ಸಿನಿಮಾಗಳನ್ನು ಮಾಡಿ ಜನರ ಮನಸ್ಸು ಗೆಲ್ಲಿ. ಪ್ರೇಕ್ಷಕರಿಗೆ ಇಷ್ಟವಾದರೆ ಹೆಸರನ್ನು ಉಳಿಸಿಕೊಳ್ಳಿ. ಅದನ್ನು ಬಿಟ್ಟು ಅಹಂಕಾರದಿಂದ ವರ್ತಿಸಿದರೆ, ಕಷ್ಟಪಟ್ಟು ಸಂಪಾದಿಸಿದ ಅಲ್ಪ ಹೆಸರು ಕೂಡ ಮರೆಯಾಗುತ್ತದೆ ಮತ್ತು ಜೀವನ ಬಾಡಿ ಹೋಗುತ್ತದೆ. ನನ್ನ ಮಾತು ಸರಿ ಎನಿಸಿದರೆ ಪಾಲಿಸಿ” ಎಂದು ಮಾರ್ಮಿಕವಾಗಿ ಬರೆದಿದ್ದಾರೆ. ಜಗ್ಗೇಶ್ ಅವರ ಈ ಪೋಸ್ಟ್ ಈಗ ಸ್ಯಾಂಡಲ್ವುಡ್ನಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದು, ಹಿರಿಯ ಕಲಾವಿದರ ಪರವಾಗಿ ಅವರು ನಿಂತಿರುವ ರೀತಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
















