ಮಂಗಳೂರು ಕರಾವಳಿ ನಗರ ಮಂಗಳೂರಿನಲ್ಲಿ ತೀವ್ರಗೊಳ್ಳುತ್ತಿರುವ ಬೇಸಿಗೆ ಬಿಸಿಲಿನ ನಡುವೆ ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗೆ ಮಂಗಳೂರು ಮಹಾನಗರ ಪಾಲಿಕೆ ಮಹತ್ವದ ಕ್ರಮ ಕೈಗೊಂಡಿದೆ. ಇಂದಿನಿಂದ ಸೋಮವಾರ (ಮೇ 4)ದಿಂದ ನಗರ ವ್ಯಾಪ್ತಿಯಲ್ಲಿ ನೀರು ಪೂರೈಕೆಗೆ ರೇಷನಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಇನ್ಮುಂದೆ ಎರಡು ದಿನಗಳಿಗೊಮ್ಮೆ ನೀರು ಪೂರೈಕೆಯಾಗಲಿದೆ ಎನ್ನಬಹುದು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಮನಪಾ ಆಡಳಿತಾಧಿಕಾರಿ ದರ್ಶನ್ ಹೆಚ್.ವಿ. ಅವರು ಈ ಕುರಿತು ಮಾಹಿತಿ ನೀಡಿದ್ದು, ನಗರದ ಎಲ್ಲಾ 60 ವಾರ್ಡ್ಗಳಿಗೆ ಸಮನ್ವಯಯುತವಾಗಿ ನೀರು ಪೂರೈಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ತುಂಬೆ ಕಿಂಡಿ ಅಣೆಕಟ್ಟು ಹಾಗೂ ಎಎಂಆರ್ ಡ್ಯಾಂಗಳಲ್ಲಿ ಜೂನ್ 10ರವರೆಗೆ ಸಾಕಾಗುವಷ್ಟು ನೀರಿನ ಸಂಗ್ರಹವಿದ್ದರೂ, ಬೇಸಿಗೆಯಲ್ಲಿ ನೀರಿನ ಬೇಡಿಕೆ ಹೆಚ್ಚುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಈ ರೇಷನಿಂಗ್ ಜಾರಿಯಾಗಿದೆ ಎನ್ನಲಾಗಿದ್ದು ಹಿಗಾಗಿ ಪ್ರಸ್ತುತ ತುಂಬೆಯಿಂದ ದಿನಕ್ಕೆ ಸುಮಾರು 160 ಎಂಎಲ್ಡಿ ನೀರು ಪಂಪಿಂಗ್ ಮಾಡಲಾಗುತ್ತಿದ್ದು, ತಾಂತ್ರಿಕವಾಗಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ನೀರಿನ ಸಮರ್ಪಕ ಹಂಚಿಕೆಗಾಗಿ ಪರ್ಯಾಯ ದಿನಗಳ ವ್ಯವಸ್ಥೆ ಅನುಸರಿಸಲಾಗುತ್ತಿದೆ ಎನ್ನಲಾಗಿದೆ.
ಮನಪಾ ಪ್ರಕಟಿಸಿರುವ ವೇಳಾಪಟ್ಟಿಯಂತೆ, ನಗರದ ಪ್ರದೇಶಗಳಿಗೆ ವಿಭಜಿಸಿ ಬೇರೆ ಬೇರೆ ದಿನಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತದೆ ಎನ್ನಲಾಗಿದೆ. ಈ ಕುರಿತ್ತಾಗಿ ಮೇ 4 (ಸೋಮವಾರ) ಬಿಜೈ, ಕದ್ರಿ, ಲಾಲ್ಬಾಗ್, ಅತ್ತಾವರ, ಹಂಪನಕಟ್ಟೆ, ಬಂದರ್, ಕಾವೂರು, ಮಂಗಳೂರು ನಗರ ಭಾಗದ ಪ್ರಮುಖ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಇದೇ ದಿನ ಪಡೀಲ್, ಜಪ್ಪಿನಮೊಗರು, ಉಳ್ಳಾಲ, ತಲಪಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೂ ನೀರು ಬಿಡಲಾಗುತ್ತದೆ ಎನ್ನಲಾಗಿದ್ದು.
ನಂತರ ಮೇ 5 (ಮಂಗಳವಾರ) ಸುರತ್ಕಲ್, ಎನ್ಐಟಿಕೆ, ಕುಳಾಯಿ, ಬಜ್ಪೆ, ಕೊಣಾಜೆ, ಮುಲ್ಕಿ ಭಾಗಗಳಿಗೆ ನೀರು ಪೂರೈಕೆ ನಿಗದಿಯಾಗಿದೆ. ಅದರ ಜೊತೆಗೆ ಕಾಟಿಪಳ್ಳ, ಪಣಂಬೂರು, ಬೈಕಂಪಾಡಿ, ಕುಡ್ಲಾ ಭಾಗಗಳಿಗೂ ನೀರು ಸರಬರಾಜು ಮಾಡಲಾಗುತ್ತದೆ. ಈ ರೀತಿಯಾಗಿ ಪರ್ಯಾಯ ದಿನಗಳಲ್ಲಿ ಬೇರೆ ಬೇರೆ ವಾರ್ಡ್ಗಳಿಗೆ ನೀರು ಪೂರೈಸುವ ವ್ಯವಸ್ಥೆ ಮುಂದುವರಿಯಲಿದೆ. ಸಾರ್ವಜನಿಕರು ತಮ್ಮ ಪ್ರದೇಶಕ್ಕೆ ನಿಗದಿಯಾದ ದಿನಗಳನ್ನು ಗಮನಿಸಿ ನೀರು ಸಂಗ್ರಹಿಸಿಕೊಳ್ಳುವಂತೆ ಮನಪಾ ಮನವಿ ಮಾಡಿದೆ ಎನ್ನಬಹುದು.
ಇನ್ನೊಂದೆಡೆ ನೋಡಿದರೆ , ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿಸಿಲಿನ ತಾಪಮಾನ 35ರಿಂದ 36 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗಿದ್ದು, ಅಂತರ್ಜಲಮಟ್ಟ ಗಣನೀಯವಾಗಿ ಕುಸಿಯುತ್ತಿದೆ. ಕೆರೆ, ಬಾವಿ ಸೇರಿದಂತೆ ಹಲವು ಜಲಮೂಲಗಳು ಬರಿದಾಗುತ್ತಿದ್ದು, ಕೆಲವು ಪ್ರದೇಶಗಳಲ್ಲಿ ಸಂಪೂರ್ಣ ಬತ್ತಿಹೋಗುವ ಸ್ಥಿತಿ ನಿರ್ಮಾಣವಾಗಿದ್ದು. ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ಭಾಗಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಹಲವು ಬಾವಿಗಳಲ್ಲಿ ನೀರಿನ ಮಟ್ಟ ಕುಸಿದು, ಕೆಲವೆಡೆ ನೀರಿನ ಹರಿವು ನಿಂತಿದೆ. ಇದು ಗ್ರಾಮೀಣ ಭಾಗದ ಜನತೆಗೆ ದೊಡ್ಡ ಸಂಕಷ್ಟವನ್ನುಂಟುಮಾಡಿದೆ ಎಂಬುದಾಗಿದೆ.
ನೀರಿನ ಕೊರತೆಯ ಪರಿಣಾಮ ಕೃಷಿ ತೋಟಗಳ ಮೇಲೂ ಬಿದ್ದಿದ್ದು, ತೋಟಗಳಿಗೆ ನೀರನ್ನು ಅಳೆದು-ತೂಗಿ ಪೂರೈಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಬಿಸಿಲು ಮುಂದುವರಿದರೆ ಕುಡಿಯುವ ನೀರಿಗೂ ತೀವ್ರ ಸಮಸ್ಯೆ ಎದುರಾಗುವ ಲಕ್ಷಣಗಳು ಕಾಣಿಸುತ್ತಿವೆ. ಹೀಗಾಗಿ ಮನಪಾ ಸಾರ್ವಜನಿಕರಿಗೆ ನೀರನ್ನು ಮಿತವಾಗಿ ಬಳಸುವಂತೆ ಮನವಿ ಮಾಡಿದ್ದು, ಅನಗತ್ಯವಾಗಿ ನೀರು ವ್ಯರ್ಥ ಮಾಡುವುದನ್ನು ತಪ್ಪಿಸಲು ಸೂಚಿಸಿದೆ. ಮಳೆಗಾಲದವರೆಗೆ ನೀರಿನ ಸಂರಕ್ಷಣೆ ಅತ್ಯಂತ ಮುಖ್ಯವಾಗಿದ್ದು, ಸಾರ್ವಜನಿಕರ ಸಹಕಾರ ಅನಿವಾರ್ಯವಾಗಿದೆ ಎನ್ನಬಹುದಾಗಿದೆ.














