ಮನೆ ಸುದ್ದಿ ಜಾಲ ‘ದೃಶ್ಯಂ 3’ : ತಮ್ಮ ಭಾಗದ ಚಿತ್ರೀಕರಣ ಪೂರ್ಣಗೊಳಿಸಿದ ಪ್ರಕಾಶ್ ರಾಜ್

‘ದೃಶ್ಯಂ 3’ : ತಮ್ಮ ಭಾಗದ ಚಿತ್ರೀಕರಣ ಪೂರ್ಣಗೊಳಿಸಿದ ಪ್ರಕಾಶ್ ರಾಜ್

0

ಬಹುಭಾಷಾ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕನ್ನಡದ ಖ್ಯಾತ ನಟ ಪ್ರಕಾಶ್ ರಾಜ್ ಅವರು ಅಜಯ್ ದೇವಗನ್ ಅಭಿನಯದ ‘ದೃಶ್ಯಂ 3’ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. 2026ರ ಫೆಬ್ರವರಿ 10ರಂದು ಚಿತ್ರತಂಡ ಸೇರಿದ್ದರು. ‘ದೃಶ್ಯಂ 3’, ಥ್ರಿಲ್ಲರ್ ಡ್ರಾಮಾ ಫ್ರಾಂಚೈಸ್‌ನ ಮೂರನೇ ಭಾಗವಾಗಿದ್ದು, ಅಕ್ಟೋಬರ್ 2ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬಹುನಿರೀಕ್ಷಿತ ಚಿತ್ರವನ್ನು ಅಭಿಷೇಕ್ ಪಾಠಕ್ ಆ್ಯಕ್ಷನ್​​ ಕಟ್ ಹೇಳುತ್ತಿದ್ದು, ಸ್ಟಾರ್ ಸ್ಟುಡಿಯೋ 18 ಪ್ರಸ್ತುತಪಡಿಸುತ್ತಿದೆ. ಅಲೋಕ್ ಜೈನ್, ಅಜಿತ್ ಅಂಧಾರೆ ಮತ್ತು ಕುಮಾರ್ ಮಂಗತ್ ಪಾಠಕ್ ಅವರೊಂದಿಗೆ ಅಭಿಷೇಕ್ ಪಾಠಕ್ ನಿರ್ಮಿಸುತ್ತಿದ್ದಾರೆ ಎನ್ನಲಾಗಿದೆ.

ಇದು ಅಜಯ್​ ದೇವ್​ಗನ್​ ಮತ್ತು ಪ್ರಕಾಶ್ ರಾಜ್ ಜೊತೆಗೆ, ಈ ಚಿತ್ರದಲ್ಲಿ ಟಬು, ಶ್ರಿಯಾ ಶರಣ್​, ಇಶಿತಾ ದತ್ತಾ, ರಜತ್ ಕಪೂರ್ ಮತ್ತು ಜೈದೀಪ್ ಅಹ್ಲಾವತ್ ಸೇರಿ ಹಲವರು ಬಣ್ಣ ಹಚ್ಚಿದ್ದಾರೆ. ದೃಶ್ಯಂ ಫ್ರ್ಯಾಂಚೈಸಿ ಮಲಯಾಳಂ ಚಿತ್ರರಂಗದಲ್ಲಿ ಹುಟ್ಟಿಕೊಂಡಿತು. ನಂತರ ಬಹುಭಾಷೆಗಳಲ್ಲಿಯೂ ಮೂಡಿಬಂತು. ದೃಶ್ಯಂ ಮಲಯಾಳಂ ಸಿನಿಮಾ ಇಂಡಸ್ಟ್ರಿಯ ದಿಕ್ಕನ್ನೇ ಬದಲಾಯಿಸಿತೆಂದರೆ ತಪ್ಪಾಗೋದಿಲ್ಲ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ ಸಿನಿಮಾ ಬಹುಭಾಷೆಗಳಲ್ಲಿ ಸೂಪರ್​ ಸ್ಟಾರ್​ಗಳ ಮುಖ್ಯಭೂಮಿಕೆಯಲ್ಲಿ ಮೂಡಿಬಂದಿದೆ. 2013ರಲ್ಲಿ ಮೂಡಿ ಬಂದ ಮೊದಲ ದೃಶ್ಯಂ (ಮಲಯಾಳಂ) ಭರ್ಜರಿ ಯಶಸ್ಸು ಕಂಡು, ಹಿಂದಿ, ತಮಿಳು, ತೆಲುಗು, ಕನ್ನಡ, ಚೈನೀಸ್ ಸೇರಿದಂತೆ ಬಹು ಭಾಷೆಗಳಲ್ಲಿ ರೀಮೇಕ್ ಆಗಿದೆ. ನಂತರ ದೃಶ್ಯಂ 2, 2021ರಲ್ಲಿ ನೇರವಾಗಿ ಒಟಿಟಿ ವೇದಿಕೆ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಥಮ ಪ್ರದರ್ಶನಗೊಂಡಿತು.

‘ದೃಶ್ಯಂ’ ಫ್ರಾಂಚೈಸಿಯ ಮೂರನೇ ಭಾಗ ಮೇ 21, ಗುರುವಾರದಂದು ಚಿತ್ರಮಂದಿರ ತಲುಪಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಮಲಯಾಳಂನ ಮೂರೂ ಚಿತ್ರಗಳನ್ನು ಜೀತು ಜೋಸೆಫ್ ನಿರ್ದೇಶಿಸಿದ್ದಾರೆ. ಮೋಹನ್​​ಲಾಲ್​ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್​ ಅಭಿನಯಿಸಿದ್ದಾರೆ. ಮೋಹನ್​​​ಲಾಲ್ ನಟನೆಯ ಮೂರನೇ ಭಾಗವೀಗ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಕೇವಲ 2 ದಿನಗಳಲ್ಲಿ ಜಾಗತಿಕವಾಗಿ 75 ಕೋಟಿ ರೂಪಾಯಿ ಗಳಿಸಿದೆ. ಹಿಂದಿ ಆವೃತ್ತಿಯ ಮೊದಲ ಚಿತ್ರ 2015ರಲ್ಲಿ ಬಿಡುಗಡೆಯಾಯಿತು ಮತ್ತು ದಿವಂಗತ ನಿಶಿಕಾಂತ್ ಕಾಮತ್ ನಿರ್ದೇಶಿಸಿದರು. ನಂತರ 2022ರಲ್ಲಿ ಪಾಠಕ್ ನಿರ್ದೇಶಿಸಿದ ಮತ್ತೊಂದು ಚಿತ್ರ ಬಿಡುಗಡೆಯಾಯಿತು. ಹಿಂದಿನ ಬಿಡುಗಡೆಗಳು ಮಲಯಾಳಂ ಆವೃತ್ತಿಯ ರೀಮೇಕ್‌ಗಳಾಗಿದ್ದರೆ, ಮೂರನೇ ಕಂತು ವಿಭಿನ್ನ ನಿರೂಪಣೆಯನ್ನು ಹೊಂದಿರಲಿದೆ ಎನ್ನಲಾಗಿದೆ.