ಮನೆ ಕಾನೂನು ಚುನಾವಣಾ ಬಾಂಡ್: ಪ್ರಕರಣ ಆಲಿಸಲು ಸಮ್ಮತಿಸಿದ ಸಿಜೆಐ ಎನ್ ವಿ ರಮಣ

ಚುನಾವಣಾ ಬಾಂಡ್: ಪ್ರಕರಣ ಆಲಿಸಲು ಸಮ್ಮತಿಸಿದ ಸಿಜೆಐ ಎನ್ ವಿ ರಮಣ

0

ದೇಶದೆಲ್ಲೆಡೆ ನಡೆಯುವ ಚುನಾವಣೆ ಹಾಗೂ ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ಮೇಲೆ ಪರಿಣಾಮ ಬೀರುವ ಮಹತ್ವದ ಬೆಳವಣಿಗೆಯೊಂದರಲ್ಲಿ, ಚುನಾವಣಾ ಬಾಂಡ್‌ ವಿತರಣೆಯನ್ನು ಸಾಧ್ಯವಾಗಿಸುವ ಕಾಯಿದೆಗಳನ್ನು ಪ್ರಶ್ನಿಸಿದ ಪ್ರಕರಣದ ವಿಚಾರಣೆ ನಡೆಸುವುದಾಗಿ ಭಾರತದ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರೆದುರು ವಕೀಲ ಪ್ರಶಾಂತ್ ಭೂಷಣ್ ಪ್ರಸ್ತಾಪಿಸಿದರು. .”ಅಬಕಾರಿ ದರ ಏರಿಕೆ ನಿಲ್ಲಿಸುವ ಸಲುವಾಗಿ ಕಲ್ಕತ್ತಾ ಮೂಲದ ಕಂಪನಿಯೊಂದು ಚುನಾವಣಾ ಬಾಂಡ್‌ಗಳ ಮೂಲಕ ₹ 40 ಕೋಟಿ ಪಾವತಿಸಿದೆ ಎಂದು ಇಂದು ಬೆಳಿಗ್ಗೆ ವರದಿಯಾಗಿದೆ. ಇದು ಪ್ರಜಾಪ್ರಭುತ್ವವನ್ನು ವಿರೂಪಗೊಳಿಸುತ್ತಿದೆ” ಎಂದು ಭೂಷಣ್ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ʼಕೋವಿಡ್‌ ಇತ್ಯಾದಿ ಸಂಗತಿಗಳು ಇಲ್ಲದಿದ್ದರೆ ನಾನು ಇದನ್ನು ಇದಾಗಲೇ ಆಲಿಸಿರುತ್ತಿದ್ದೆʼ ಎಂದರು. ʼಇದು ಗಂಭೀರವಾದ ಸಂಗತಿʼ ಎಂದು ಪ್ರಶಾಂತ್‌ ಭೂಷಣ್‌ ಹೇಳಿದಾಗ ಪ್ರಕರಣ ಆಲಿಸಲು ನ್ಯಾ. ರಮಣ ಸಮ್ಮತಿ ಸೂಚಿಸಿದರು.

ಚುನಾವಣಾ ಬಾಂಡ್ ಎನ್ನುವುದು ಪ್ರಾಮಿಸರಿ ನೋಟ್ ಅಥವಾ ಬೇರರ್ ಬಾಂಡ್‌ ರೂಪವಾಗಿದ್ದು ಭಾರತೀಯ ಪ್ರಜೆಯಾಗಿರುವ ವ್ಯಕ್ತಿ ಇಲ್ಲವೇ ಭಾರತದಲ್ಲಿ ಸಂಘಟನೆಗೊಂಡ ಅಥವಾ ಸ್ಥಾಪಿತವಾದ ಸಂಸ್ಥೆ, ಕಂಪನಿ ಅಥವಾ ವ್ಯಕ್ತಿಗಳ ಸಂಘಟನೆ ಇದನ್ನು ಖರೀದಿಸಬಹುದಾಗಿದೆ. ನಿರ್ದಿಷ್ಟವಾಗಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಸಲುವಾಗಿ ಈ ನಗದು ಬಾಂಡ್‌ಗಳನ್ನು ವಿತರಿಸಲಾಗುತ್ತದೆ.

ಹಣಕಾಸು ಕಾಯಿದೆ- 2017ರ ಮೂಲಕ ರಾಜ್ಯಸಭೆಯ ಸಮ್ಮತಿ ಪಡೆಯುವ ಅವಶ್ಯಕತೆ ಇಲ್ಲದೆ ಅಸ್ತಿತ್ವಕ್ಕೆ ಬಂದ ಈ ಬಾಂಡ್‌ಗಳ ವಿರುದ್ಧ ಈಗಾಗಲೇ ಹಲವು ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಇದರಿಂದ ರಾಜಕೀಯ ಪಕ್ಷಗಳಿಗೆ ಅನಿಯಂತ್ರಿತ ಮತ್ತು ಪರಿಶೀಲನೆಗೆ ಒಳಪಡದ ದೇಣಿಗೆ ನೀಡಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂಬುದು ಈ ದೂರುಗಳ ಸಾರವಾಗಿದೆ. ಪಾರದರ್ಶಕತೆಯನ್ನು ಮರೆಮಾಚಲು ಅನುಕೂಲಕರ ಎನ್ನುವ ಅಪಾದನೆ ಕೇಳಿಬಂದಿದೆ.