ಮನೆ ಸುದ್ದಿ ಜಾಲ ಬಲ್ಡೋಟಾ ಕಾರ್ಖಾನೆಗೆ ಜಾನುವಾರುಗಳ ಜೋತೆಗೆ ರೈತರ ಮುತ್ತಿಗೆ : ಕೊಪ್ಪಳ

ಬಲ್ಡೋಟಾ ಕಾರ್ಖಾನೆಗೆ ಜಾನುವಾರುಗಳ ಜೋತೆಗೆ ರೈತರ ಮುತ್ತಿಗೆ : ಕೊಪ್ಪಳ

0

ಕೊಪ್ಪಳ  : ಜಿಲ್ಲೆಯ ಬಸಾಪೂರ ಬಳಿ ಇರುವ ಬಲ್ಡೋಟಾ ಕಾರ್ಖಾನೆ ವಿರುದ್ಧ ರೈತರ ಹೋರಾಟ ತೀವ್ರವಾಗಿದೆ. ಇಂದು ( ಮೇ 5) ಬಲ್ಡೋಟಾವಿರುದ್ಧ ತಿರುಗಿಬಿದ್ದಿರುವ ರೈತರು ಕಾರ್ಖಾನೆ ಮುಂಭಾಗ ಭಾರೀ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಕೇವಲ ರೈತರಷ್ಟೇ ಅಲ್ಲದೇ ನೂರಾರು ಕುರಿಗಳು ಮತ್ತು ಜಾನುವಾರುಗಳು ಕಾರ್ಖಾನೆಯ ಬೃಹತ್ ಗೇಟಿನ ಮುಂದೆ ಸಾಲುಗಟ್ಟಿ ನಿಂತು ಪ್ರತಿಭಟನೆಗೆ ಸಾಕ್ಷಿಯಾಗಿವೆ ಎನ್ನಲಾಗಿದೆ.

ಈ ಕುರಿತು ಬಲ್ಡೋಟಾ ಕಾರ್ಖಾನೆಯ ಆವರಣದಲ್ಲಿರುವ 44 ಎಕರೆ ವಿಸ್ತೀರ್ಣದ ಕೆರೆ ಈಗ ರೈತರ ಪಾಲಿಗೆ ದಕ್ಕದಂತಾಗಿದೆ. ‘ನಮ್ಮ ಕೆರೆಯನ್ನು ಜಾನುವಾರುಗಳಿಗೆ ಮುಕ್ತ ಮಾಡಿ, ರೈತರಿಗೆ ಸೇರಬೇಕಾದ ಭೂಮಿಯನ್ನು ಮರಳಿ ನೀಡಿ’ ಎಂದು ಆಗ್ರಹಿಸಿ ರೈತ ಸಂಘ ಸಮರ ಸಾರಿದೆ. ಈ ಬೃಹತ್ ಹೋರಾಟದ ಮುಂದಾಳತ್ವವನ್ನು ಮೇಲುಕೋಟೆ ಶಾಸಕ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ವಹಿಸಿಕೊಂಡಿದ್ದಾರೆ. ನೂರಾರು ಬೈಕ್‌ಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ಹಸಿರು ಶಾಲು ಹೊದ್ದು ಆಗಮಿಸಿದ ರೈತರು, ಬಲ್ಡೋಟಾ ಕಾರ್ಖಾನೆಯ ಅಹಂಕಾರದ ವಿರುದ್ಧ ಗುಡುಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ ಎನ್ನಲಾಗುತ್ತಿದೆ.

ಹಾಗೂ ಪ್ರತಿಭಟನೆ ಕೇವಲ ಘೋಷಣೆಗಳಿಗೆ ಸೀಮಿತವಾಗಲಿಲ್ಲ. ರೈತರು ಮತ್ತು ಕುರಿಗಾರರು ತಮ್ಮ ನೂರಾರು ಕುರಿಗಳನ್ನು ಕಾರ್ಖಾನೆಯ ಒಳಕ್ಕೆ ನುಗ್ಗಿಸಲು ಯತ್ನಿಸಿದರು. ‘ನಮ್ಮ ಕುರಿಗಳಿಗೆ, ಜಾನುವಾರುಗಳಿಗೆ ನೀರು ಕುಡಿಯಲು ಕೆರೆ ಬೇಕು ಎನ್ನುತ್ತಾ ಗೇಟಿನತ್ತ ನುಗ್ಗಿದ ದೃಶ್ಯಗಳು ಎಲ್ಲರ ಗಮನ ಸೆಳೆದವು. ಆದರಿಂದ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಾರ್ಖಾನೆಯ ಮುಂಭಾಗದಲ್ಲಿಯೇ ರೈತರನ್ನು ತಡೆದರು. ಕುರಿಗಳು ಒಳ ಹೋಗದಂತೆ ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇದರಿಂದ ಪೊಲೀಸರು ಮತ್ತು ರೈತರ ನಡುವೆ ತಳ್ಳಾಟ-ನೂಕಾಟ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸದ್ಯ ಬಲ್ಡೋಟಾ ಕಾರ್ಖಾನೆ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ತಮ್ಮ ಹಕ್ಕಿನ ಕೆರೆಗಾಗಿ ಜಾನುವಾರುಗಳ ಸಮೇತ ಧರಣಿ ಕುಳಿತಿರುವ ರೈತರು, ನ್ಯಾಯ ಸಿಗುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ ಎನ್ನುವುದಾಗಿದೆ.