ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯವು ವಿದ್ಯಾರ್ಥಿಯನ್ನು ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿ, ಪೀಠೋಪಕರಣ ಧ್ವಂಸಗೊಳಿಸಿದ್ದ ಎನ್ಎಸ್ಯುಐ ಸಂಘಟನೆಯ 15 ಜನರ ಮೇಲೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಕುವೆಂಪು ವಿಶ್ವವಿದ್ಯಾನಿಲಯದ ಅಸಿಸ್ಟೇಟ್ ರಿಜಿಸ್ಟ್ರಾರ್ ನಾಗರಾಜ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ದೂರಿನಲ್ಲಿ ಎನ್ಎಸ್ಯುಐ ಸಂಘಟನೆರವರು ಅಕ್ರಮವಾಗಿ ಕೂಟ ಕಟ್ಟಿಕೊಂಡು ಆಡಳಿತ ಕಚೇರಿಯ ಪ್ರವೇಶ ದ್ವಾರದಲ್ಲಿದ್ದ ಅನೇಕ ಸಸ್ಯ ಕುಂಡಗಳನ್ನು ಎತ್ತಿ ಹಾಕಿ ಒಡೆದು ಹಾಕಿದ್ದಾರೆ ಎನ್ನಲಾಗಿದೆ . ಇಲ್ಲಿನ ವಿವಿಯ ಸಿಬ್ಬಂದಿಗಳಾದ ಮೋಹಿತ್ ಗುಜ್ಜರ್ ಉಪ ಕುಲಸಚಿವರಾದ ಸುಜಾತ, ಶಾಖಾಧಿಕಾರಿ ರೇಖಾ, ಪ್ರಥಮ ದರ್ಜೆ ಸಹಾಯಕರಾದ ಅಮರ ಜ್ಯೋತಿ, ಸಹಾಯಕ ಉಪ ಕುಲಸಚಿವರಾದ ಗೋವಿಂದಾಚಾರಿ ಸೇರಿ ಇತರರು ತಡೆಯಲು ಯತ್ನಿಸಿದಾಗ ಅವರನ್ನು ತಳ್ಳಾಡಿ, ನಿಮ್ಮನ್ನೆಲ್ಲಾ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ.
ಪ್ರಥಮ ಮಹಡಿಯಲ್ಲಿನ ಕುಲಸಚಿವರ ಕಚೇರಿ ಹಾಗೂ ಅವರ ಆಪ್ತ ಸಹಾಯಕರ ಕಚೇರಿ ಮುಂಭಾಗದ್ದಲ್ಲಿದ್ದ ಸಸ್ಯ ಕುಂಡಗಳನ್ನು ಎತ್ತಿ ಒಡೆದು ಹಾಕಿದ್ದಾರೆ. ಅಲ್ಲದೆ ನಾಮ ಫಲಕಕ್ಕೆ ಮಸಿ ಬಳೆದಿದ್ದಾರೆ. ಅಲ್ಲದೆ ಅನೇಕ ಪ್ಲಾಸ್ಟಿಕ್ ಖುರ್ಚಿಗಳನ್ನು ಒಡೆದು ಸುಮಾರು 4 ಲಕ್ಷ ರೂ. ಮೌಲ್ಯದ ನಷ್ಟ ಉಂಟು ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಎನ್ಎಸ್ಯುಐನ ಜಿಲ್ಲಾಧ್ಯಕ್ಷರಾದ ವಿಜಯ್ ಕುಮಾರ್ ಸೇರಿದಂತೆ ಇತರರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ .ನಿನ್ನೆ ಸಂಜೆ ಭದ್ರಾವತಿ ಗ್ರಾಮಾಂತರ ಪೊಲೀಸರು ಎನ್ಎಸ್ಯುಐ ಸಂಘಟನೆಯ 10 ಮಂದಿಯನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ.
ಪ್ರತಿ ಬಾರಿ ಪ್ರತಿಭಟನೆ ನಡೆಸಿದಾಗ ವಿವಿಯ ಕುಲಪತಿಗಳು ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡುತ್ತಿದ್ಧರು. ಆದರೆ, ಯಾವುದೇ ಸಮಸ್ಯೆ ಪರಿಹರಿಸಿರಲಿಲ್ಲ. ಪ್ರವೇಶಾತಿ ಶುಲ್ಕ ಹೆಚ್ಚಳ, ಪರೀಕ್ಷಾ ಶುಲ್ಕ ಹೆಚ್ಚಳ ಹಾಗೂ ಪರೀಕ್ಷೆ ಮುಗಿದರೂ ಫಲಿತಾಂಶ ವಿಳಂಬ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಕ್ಸ್ ಕಾರ್ಡ್ ವಿತರಿಸುವಲ್ಲಿನ ವಿಳಂಬವನ್ನು ಖಂಡಿಸಿ ಎಪ್ರಿಲ್ 28 ರಂದು ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾಸಂಘಟನೆ ಪ್ರತಿಭಟನೆ ನಡೆಸಿ, ವಿಸಿ ಕಚೇರಿಗೆ ನುಗ್ಗಿ ಹೂವಿನ ಕುಂಡ ಮತ್ತು ಪೀಠೋಪಕರಣಗಳನ್ನು ಒಡೆದು ಹಾಕಿ ಆಕ್ರೋಶ ಹೊರಹಾಕಿತ್ತು ಎನ್ನಲಾಗುತ್ತಿದೆ.
ಹೀಗೆ 5 ತಿಂಗಳ ಹಿಂದೆ ಪರೀಕ್ಷೆ ಬರೆದಿದ್ದ 1, 3 ಮತ್ತು 5ನೇ ಸೆಮಿಸ್ಟರ್ಗಳ ಫಲಿತಾಂಶ ಪ್ರಕಟಿಸಿಲ್ಲ. ಮೌಲ್ಯಮಾಪನದ ಗೌರವಧನ ನೀಡದೇ ಇರುವುದರಿಂದ ಉಪನ್ಯಾಸಕರು ಮೌಲ್ಯಮಾಪನವನ್ನು ಬಹಿಷ್ಕರಿಸಿದ್ದಾರೆ. ಅಲ್ಲದೇ 3 ವರ್ಷಗಳಿಂದ ಯಾವುದೇ ಪರೀಕ್ಷೆಗಳ ಅಂಕಪಟ್ಟಿಯನ್ನು ವಿತರಿಸದೇ ಅಂಕಪಟ್ಟಿಗಳನ್ನು ಮುದ್ರಿಸಲು ಟೆಂಡರ್ ಕರೆಯುವುದಾಗಿ ಹೇಳುತ್ತಲೇ ಬರಲಾಗುತ್ತಿದೆ. ಇದರಿಂದಾಗಿ ಪದವಿ ಪೂರೈಸಿದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ ಎನ್ನಲಾಗಿದೆ.
ಇದರಿಂದ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಪಾಸಿಂಗ್ ಸರ್ಟಿಫಿಕೇಟ್ ಅಥವಾ ಪದವಿ ಪ್ರಮಾಣಪತ್ರ ನೀಡುತ್ತಿಲ್ಲ. ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ನೀಡುವಂತೆ ಜಿನ್ಯುಯೆನ್ ಸರ್ಟಿಫಿಕೇಟ್ ಕೊಡದೇ ಇರುವುದರಿಂದಾಗಿ ಕುವೆಂಪು ವಿವಿಯಲ್ಲಿ ವ್ಯಾಸಂಗ ಮಾಡಿದವರಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಸಿಗುವುದು ಕಷ್ಟವಾಗುತ್ತಿದೆ. ವಿಶ್ವವಿದ್ಯಾಲಯದ ಆಂತರಿಕ ಕಚ್ಚಾಟದಿಂದಾಗಿ ಘಟಿಕೋತ್ಸವ ಸಮಾರಂಭವನ್ನು ಸಹ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಎನ್ಎಸ್ಯುಐನ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು ಎನ್ನಬಹುದು .















